ನವದೆಹಲಿ: ಕರೊನಾ ಮಹಾಮಾರಿ ಹರಡುವುದನ್ನು ತಡೆಯಲು ವಿಧಿಸಲಾಗಿರುವ ನಿಯಂತ್ರಣ ಮಾರ್ಗಸೂಚಿಗಳನ್ನು ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಅಕ್ಟೋಬರ್ 31ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಸೋಂಕಿನ ಪ್ರಕರಣಗಳಲ್ಲಿ ಇಳಿಮುಖವಾಗುತ್ತಿರುವುದರಿಂದ ಜನರು ಶಿಷ್ಟಾಚಾರವನ್ನು ಪಾಲಿಸದಿರುವುದು ಮತ್ತು ಸ್ಥಳಿಯವಾಗಿ ಇನ್ನೂ ವೈರಸ್ ಹರಡುತ್ತಿರುವ ಭೀತಿಯಿಂದಾಗಿ ನಿರ್ಬಂಧ ಮುಂದುವರಿಸುವುದು ಅಗತ್ಯವಾಗಿದೆ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಗೃಹ ಕಾರ್ಯದಶಿರ್ ಅಜಯ್ ಭಲ್ಲಾ ಅಭಿಪ್ರಾಯ ಪಟ್ಟಿದ್ದಾರೆ. ಹಬ್ಬದ ಋತುವಿನಲ್ಲಿ ಜನರು ಕರೊನಾ ನಿಯಂತ್ರಣ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್ಟಿಎಜಿಐ) ಕೂಡ ಇತ್ತೀಚೆಗೆ ಹೇಳಿತ್ತು.
ಕೇಂದ್ರ ಆದೇಶದಲ್ಲಿ ಏನಿದೆ?
* ದೀಪಾವಳಿ ಸಹಿತ ವಿವಿಧ ಹಬ್ಬಗಳನ್ನು ತುಂಬಾ ಎಚ್ಚರಿಕೆಯಿಂದ, ಸುರತವಾಗಿ ಹಾಗೂ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಆಚರಿಸುವಂತೆ ಗೃಹ ಸಚಿವಾಲಯ ಸಲಹೆ ಮಾಡಿದೆ.
* ಹಬ್ಬಗಳು, ಮೇಳಗಳು, ಧಾಮಿರ್ಕ ಕಾರ್ಯಕ್ರಮ ಹಾಗೂ ಸಮಾರಂಭಗಳ ವೇಳೆ ಹೆಚ್ಚು ಜನರು ಗುಂಪುಗೂಡದಂತೆ ಅತ್ಯಂತ ಎಚ್ಚರಿಕೆ ವಹಿಸುವುದು. ಜನಸಂದಣಿ ಹೆಚ್ಚಾದರೆ ದೇಶದಲ್ಲಿ ಕರೊನಾ ವೈರಸ್ ಹಾವಳಿ ಹೆಚ್ಚಾಗಬಹುದು.
* ಪಾಸಿಟಿವಿಟಿ ದರ, ಹೊಸ ಕೇಸ್, ಆಸ್ಪತ್ರೆ ಬೆಡ್ಗಳಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಮೇಲೆ ನಿಕಟ ನಿಗಾ ಅಗತ್ಯ. ಯಾವುದೇ ಜಿಲ್ಲೆಯಲ್ಲಿ ಅಧಿಕ ಪಾಸಿಟಿವಿಟಿ ದರ ಇದೆಯೇ ಎಂದು ತಿಳಿಯಲು ಹಾಗೂ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲು ಇದರಿಂದ ನೆರವು.
* ಟೆಸ್ಟ್, ಟ್ರಾ$್ಯಕ್, ಟ್ರೀಟ್, ಲಸಿಕೆ ನೀಡಿಕೆ ಸೂತ್ರದ ಪಾಲನೆ. ವೈರಸ್ ಹರಡದಿರಲು ಶಿಷ್ಟಾಚಾರದ ಪಾಲನೆ.
* ಹಬ್ಬಗಳ ನಡುವೆಯೂ ರಾಜ್ಯ ಮತ್ತು ಯುಟಿ ಅಧಿಕಾರಿಗಳು ಲಸಿಕೆ ಅಭಿಯಾನ ಮುಂದುವರಿಸಬೇಕು. ಅರ್ಹರಿಗೆ ಎರಡನೇ ಡೋಸ್ ಹಾಕಲು ಆದ್ಯತೆ.
* ಈ ಆದೇಶಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ಜನರಿಗೆ ಹಾಗೂ ಸಂಬಂಧಪಟ್ಟ ಕಾರ್ಯಕರ್ತರಿಗೆ ವ್ಯಾಪಕವಾಗಿ ತಲುಪಲು ಕ್ರಮ.
ಸ್ಪುಟ್ನಿಕ್ ಲಸಿಕೆ ಆರ್ಡರ್ ರದ್ದು
ಸರ್ಕಾರದಿಂದ ಇತರ ಲಸಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಉಚಿತವಾಗಿ ಸಿಗುತ್ತಿರುವುದರಿಂದ ಭಾರತದ ಕೆಲವು ಖಾಸಗಿ ಆಸ್ಪತ್ರೆಗಳು ರಷ್ಯಾದ ಸ್ಪುಟ್ನಿಕ್ ಲಸಿಕೆಯ ಖರೀದಿ ಆರ್ಡರ್ಗಳನ್ನು ರದ್ದುಪಡಿಸಿವೆ. ಸ್ಪುಟ್ನಿಕ್ ಲಸಿಕೆಗೆ ಹೆಚ್ಚು ಬೇಡಿಕೆ ಇಲ್ಲದಿರುವುದು ಹಾಗೂ ಅದನ್ನು ಸಂಗ್ರಹಿಸಿಡಲು ತೀರಾ ತಂಪು ವಾತಾವರಣದ ಶೀತಲೀಕೃತ ವ್ಯವಸ್ಥೆ ಬೇಕಾಗಿರುವುದು ಕೂಡ ಖರೀದಿ ಬೇಡಿಕೆಯನ್ನು ರದ್ದುಪಡಿಸಲು ಕಾರಣ ಎಂದು ಲಸಿಕೆ ಉದ್ಯಮದ ಅಧಿಕಾರಿಗಳು ಹೇಳಿದ್ದಾರೆ. ಜಗತ್ತಿನ ಅತಿ ದೊಡ್ಡ ಲಸಿಕೆ ಉತ್ಪಾದಕ ದೇಶವಾಗಿರುವ ಭಾರತದಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ ಮಾತ್ರವೇ ಸ್ಪುಟ್ನಿಕ್ ಲಸಿಕೆಯನ್ನು ಮಾರಲಾಗುತ್ತಿದೆ. ತಮ್ಮ ಆಸ್ಪತ್ರೆ 2,500 ಡೋಸ್ಗಳ ಆರ್ಡರನ್ನು ರದ್ದುಪಡಿಸಿದೆ ಎಂದು ಪುಣೆಯ ಭಾರತೀಯ ವಿದ್ಯಾಪಿಠ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಅಧಿಕಾರಿ ಜಿತೇಂದ್ರ ಓಸ್ವಾಲ್ ಹೇಳಿದ್ದಾರೆ. ಭಾರತವೂ ಸ್ಪುಟ್ನಿಕ್ ಲಸಿಕೆ ಉತ್ಪಾದನೆಯ ಒಂದು ಪ್ರಮುಖ ಕೇಂದ್ರವಾಗಿದೆ. ವಾಷಿರ್ಕ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆ ಉತ್ಪಾದನೆಯ ಗುರಿ ಹೊಂದಿದ್ದು ಈಗ ದೇಶದಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ರಫ್ತಿಗೆ ಹೆಚ್ಚು ಗಮನ ನೀಡಬೇಕಾಗಿದೆ.
ದೇಶದಲ್ಲಿ ಕೇಸ್ ಇಳಿಕೆ
ಸತತ ಎರಡನೇ ದಿನವಾದ ಬುಧವಾರವೂ ದೇಶದಲ್ಲಿ ಕರೊನಾದ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಬುಧವಾರ 18,870 ಕೇಸ್ಗಳು ದೃಢಪಟ್ಟಿವೆ. 201 ದಿನಗಳಲ್ಲಿ ಎರಡನೇ ಬಾರಿಗೆ ದೇಶದಲ್ಲಿ 20,000ಕ್ಕಿಂತ ಕಡಿಮೆ ಕೇಸ್ಗಳು ದಾಖಲಾಗಿವೆ. ಮಂಗಳವಾರ 18,795 ಕೇಸ್ ದೃಢಪಟ್ಟಿದ್ದವು. ಆರೋಗ್ಯ ಸಚಿವಾಲಯದ ಪ್ರಕಾರ ದೇಶದಲ್ಲಿ ಈಗ 2,82,520 ಸಕ್ರಿಯ ಪ್ರಕರಣಗಳಿದ್ದು 2020ರ ಮಾರ್ಚ್ ನಂತರ ಇದೇ ಅತಿ ಕಡಿಮೆ ಪ್ರಕರಣವಾಗಿದೆ. ದೇಶದಲ್ಲಿ ಸೋಂಕಿನ ಒಟ್ಟು ಪ್ರಕರಣ 3,37,16,451ಕ್ಕೆ ಏರಿದೆ. 378 ಸಾವಿನೊಂದಿಗೆ ಬಲಿಯಾದವರ ಸಂಖ್ಯೆ 4,47,751 ಆಗಿದೆ.
ದೀರ್ಘಾವಧಿ ಲಕ್ಷಣ
ಕೋವಿಡ್ ಸೋಂಕಿತ ಶೇಕಡ 37ರಷ್ಟು ಜನರಲ್ಲಿ ಕನಿಷ್ಠ ಒಂದು ದೀರ್ಕಾಲೀನ ಲಕ್ಷಣ ಪತ್ತೆಯಾಗಿದೆ ಎಂದು ಆಕ್ಸ್ರ್ಡ್ ವಿವಿ ಮತ್ತು ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನ ತಿಳಿಸಿದೆ. ಕರೊನಾ ಸೋಂಕು ತಗುಲಿದ ಮೂರರಿಂದ ಆರು ತಿಂಗಳಲ್ಲಿ ಈ ಲಕ್ಷಣಗಳು ಪತ್ತೆಯಾಗಿವೆ ಎಂದು ಬುಧವಾರ ಬಹಿರಂಗಪಡಿಸಿದ ಅಧ್ಯಯನ ವರದಿ ಹೇಳಿದೆ. ಉಸಿರಾಟದ ತೊಂದರೆಗಳು, ಸುಸ್ತು, ನೋವು ಮತ್ತು ಆತಂಕ ಮೊದಲಾದವು ಸಾಮಾನ್ಯ ಲಕ್ಷಣಗಳಾಗಿವೆ ಎಂದು 2,70,000ಕ್ಕೂ ಅಧಿಕ ರೋಗಿಗಳ ಅಧ್ಯಯನ ನಡೆಸಿದ ಸಂಶೋಧಕರು ಹೇಳಿದ್ದಾರೆ.
ಸೋಂಕಿತ ಬೆಕ್ಕುಗಳ ಹತ್ಯೆ
ಉತ್ತರ ಚೀನಾದ ಹಬಿರ್ನ್ ನಗರದಲ್ಲಿ ಕರೊನಾ ಸೋಂಕು ತಗಲಿದ ಮೂರು ಬೆಕ್ಕುಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಕೊಂದು ಹಾಕಿದ್ದಾರೆ ಎಂದು ಸ್ಥಳಿಯ ಮಾಧ್ಯಮ ಬುಧವಾರ ವರದಿ ಮಾಡಿದೆ. ಸೆಪ್ಟೆಂಬರ್ 21ರಂದು ಕರೊನಾ ಪಾಸಿಟಿವ್ ಆಗಿದ್ದ ಮನೆಯ ಮಾಲಿಕ, ಮೂರು ಬೆಕ್ಕುಗಳಿಗೆ ಮನೆಯ ಹೊರಗೆ ಆಹಾರ ಇಟ್ಟು ಐಸೋಲೇಷನ್ಗೆ ಒಳಗಾಗಿದ್ದ. ನಂತರ ಬೆಕ್ಕುಗಳಿಗೂ ಸೋಂಕಿರುವುದು ಗೊತ್ತಾಗಿ ಅಧಿಕಾರಿಗಳು ಅವನ್ನು ಕೊಂದಿದ್ದಾರೆ.