ಬೆಂಗಳೂರು: ಕರೊನಾ 2ನೇ ಅಲೆಯ ದಿಗಿಲು, ದೆಹಲಿ, ಹರಿಯಾಣ ಸೇರಿ ಕೆಲವು ರಾಜ್ಯಗಳಲ್ಲಿ ಹಾವಳಿ ಮರುಕಳಿಸಿದ ಆತಂಕದ ನಡುವೆ ರಾಜ್ಯದಲ್ಲಿ ಸೋಂಕು ಮಾರಿಯ ಉಪಟಳ ಕುಗ್ಗಿದೆ. ಇದರಿಂದಾಗಿ ಕಳೆದ 8 ತಿಂಗಳಿಂದ ತತ್ತರಿಸಿರುವ ಜನರು ಸದ್ಯಕ್ಕಂತೂ ಹಿಗ್ಗುವಂತಾಗಿದೆ.
ಲಭ್ಯ ಮಾಹಿತಿ ಪ್ರಕಾರ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರದಲ್ಲಿ ಕಳೆದೊಂದು ತಿಂಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗರಿಷ್ಠ ಪ್ರಮಾಣದ ಇಳಿಕೆಯಾಗಿದೆ.
ಮತ್ತೊಂದೆಡೆ ಮಧ್ಯಪ್ರದೇಶ, ಹಿಮಾಚಲಪ್ರದೇಶ, ದೆಹಲಿ, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಏರುಮುಖವಾಗಿವೆ. ಇದೇ ಅವಧಿಯಲ್ಲಿ ಕರ್ನಾಟಕದ ಸಕ್ರಿಯ ಪ್ರಕರಣಗಳ ಸಂಖ್ಯೆ 68,180ರಿಂದ 24,776, ಮಹಾರಾಷ್ಟ್ರ 1,30,286ರಿಂದ 90,965, ಕೇರಳ 93,369ರಿಂದ 64,964, ತಮಿಳುನಾಡು, 26,356ರಿಂದ 11,073 ಮತ್ತು ಆಂಧ್ರಪ್ರದೇಶದಲ್ಲಿ 26,622ರಿಂದ 11,571ಕ್ಕೆ ಇಳಿಕೆಯಾಗಿದೆ. ಹೊಸ ಪ್ರಕರಣಗಳಿಗೆ ಹೋಲಿಸಿದರೆ ಚೇತರಿಕೆ ಪ್ರಮಾಣವೂ ವೃದ್ಧಿಯಾಗಿದೆ. ಸಕ್ರಿಯ ಕೇಸ್ಗೆ ಹೋಲಿಸಿದರೆ ಶೇ.19.8 ಪಟ್ಟು ಹೆಚ್ಚು ಪ್ರಕರಣ ಗುಣಮುಖವಾಗಿವೆ ಎಂದು ಮೂಲಗಳು ತಿಳಿಸಿವೆ.
ಕಳೆದೊಂದು ತಿಂಗಳಲ್ಲಿ ಕರ್ನಾಟಕದ ಸಕ್ರಿಯ ಕರೊನಾ ಪ್ರಕರಣಗಳ ಸಂಖ್ಯೆ ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಇಳಿಮುಖ ಕಂಡಿದೆ. ರಾಜ್ಯದಲ್ಲಿ ಅ.29ರಂದು ಇದ್ದ 68,180 ಸಕ್ರಿಯ ಪ್ರಕರಣಗಳು ನ.29ರ ವೇಳೆಗೆ 24,776 ಆಗಿದ್ದು, ಶೇ.63.6 ಇಳಿಕೆ ದಾಖಲಾಗಿದೆ.
| ಡಾ.ಕೆ.ಸುಧಾಕರ್ ಆರೋಗ್ಯ ಸಚಿವ