ನ್ಯೂಸ್

ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ವರ್ಚಸ್ಸು ತಂದ ಕರೊನಾ!

ಕೆ.ಎಂ.ಪಂಕಜ ಬೆಂಗಳೂರು

ಇಡೀ ವಿಶ್ವವನ್ನು ಹಿಂಡುತ್ತಿರುವ ಕರೊನಾ ಮಹಾಮಾರಿ ಕರ್ನಾಟಕದ ಮಟ್ಟಿಗಂತೂ ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಜೀವಕಳೆ ತಂದುಕೊಟ್ಟಿರುವುದು ಸುಳ್ಳಲ್ಲ! ಹೌದು ಸರ್ಕಾರಿ ಆಸ್ಪತ್ರೆಗಳೆಂದರೆ ಹೆದರಿ ದೂರ ಸರಿಯುತ್ತಿದ್ದವರೆಲ್ಲ ಇದೀಗ ಕರೊನಾದ ಸಾವಿನ ದವಡೆಯಿಂದ ಪಾರು ಮಾಡುತ್ತಿರುವ ಅದೇ ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸೌಲಭ್ಯ ಮೆಚ್ಚಿಕೊಳ್ಳುತ್ತಿದ್ದಾರೆ. ಕರೊನಾ ಸಂದರ್ಭದಲ್ಲಿ ಸೌಕರ್ಯ ಹೆಚ್ಚಳ, ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿದ ವೆಂಟಿಲೇಟರ್ ಸೌಲಭ್ಯ ಕಂಡ ಜನರ ಮನಸ್ಥಿತಿಯೂ ಬದಲಾಗುತ್ತಿದೆ.

ಮೂಲಸೌಕರ್ಯ ಹೆಚ್ಚಳ: ವೆಂಟಿಲೇಟರ್, ಪರೀಕ್ಷಾ ಸೌಲಭ್ಯ, ಸ್ವಚ್ಛತೆ, ಸಿಬ್ಬಂದಿಗೆ ನೀಡಿರುವ ವಿಶೇಷ ತರಬೇತಿಯನ್ನೆಲ್ಲ ಗಣನೆಗೆ ತೆಗೆದುಕೊಂಡರೆ ರಾಜ್ಯದ ವೈದ್ಯಕೀಯ ಸೌಲಭ್ಯ ಶೇ.30 ಉತ್ತಮಗೊಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಮುಂದಿದೆ ಸವಾಲು

ಸಾರ್ಸ್, ಎಚ್1ಎನ್1 ರೀತಿ ಅನೇಕ ತೊಂದರೆ ಕಾಣಿಸಿಕೊಂಡಾಗ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿತ್ತು. ನಂತರದ ದಿನಗಳಲ್ಲಿ ಅವು ಉಪಯೋ ಗಕ್ಕೆ ಬರುತ್ತಿರಲಿಲ್ಲ. ಆದರೆ ಈ ಬಾರಿ ಶಾಶ್ವತವಾದ ಉಪಕರಣ ಖರೀದಿಸ

ಲಾಗಿದ್ದು, ಮುಂದೆಯೂ ಉಪ ಯೋಗಕ್ಕೆ ಬರಲಿವೆ. ಅನೇಕ ಜಿಲ್ಲಾಸ್ಪತ್ರೆ ಗಳಲ್ಲಿ ಈ ಹಿಂದಿದ್ದ ಹಾಸಿಗೆ ಸಂಖ್ಯೆಗೆ ಶೇ.10-30 ಸೇರ್ಪಡೆ ಮಾಡಲಾಗಿದೆ. ಆದರೆ ಈ ವ್ಯವಸ್ಥೆಯನ್ನು ಭವಿಷ್ಯದಲ್ಲೂ ಕಾಯ್ದುಕೊಳ್ಳುವ ಸವಾಲು ಸರ್ಕಾರದ ಮುಂದಿದೆ.

ಸಿಕ್ಕಿತು ಆದ್ಯತೆ, ಹೆಚ್ಚಿದ ಸ್ವಚ್ಛತೆ

ಸರ್ಕಾರಿ ಆಸ್ಪತ್ರೆಗಳು ಕೊಳಕೆಂಬ ಅಪವಾದ ಅಳಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿವೆ. ಕರೊನಾ ಕಾರಣಕ್ಕೆ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಾದಿಯಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳವರೆಗೆ ಎಲ್ಲ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹಾಗೂ ವೈದ್ಯಕೀಯ ಸೇವೆ ಮೇಲ್ದರ್ಜೆಗೇರಿವೆ. ಇದರೊಂದಿಗೆ ಹೊರ ರೋಗಿಗಳ ವಿಭಾಗ, ರೋಗಿಗಳನ್ನು ದಾಖಲಿಸುವ ವಾರ್ಡ್, ಶೌಚಗೃಹ ಸೇರಿ ಆಸ್ಪತ್ರೆಯ ಆವರಣದಲ್ಲಿ ಸ್ಚಚ್ಛತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವೈದ್ಯರು, ಶುಶ್ರೂಷಕರು ಮಾತ್ರವಲ್ಲದೆ ಎಲ್ಲ ವರ್ಗದ ಸಿಬ್ಬಂದಿಗೂ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಕರೊನಾ ವೈರಸ್ ಸೋಂಕಿತರಲ್ಲಿ ಶೇ. 95 ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲೇ ಸೇವೆ ಪಡೆದಿದ್ದಾರೆ. ಇದರಿಂದ ಆಸ್ಪತ್ರೆಯ ಸಿಬ್ಬಂದಿ ಆರೋಗ್ಯದ ಬಗ್ಗೆಯೂ ಕಾಳಜಿ ಹೆಚ್ಚಿದೆ.

ಈಡೇರಿದ ದಶಕದ ಬೇಡಿಕೆ

ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆ ನೀಡಲು ವೆಂಟಿಲೇಟರ್ ಸೌಲಭ್ಯ ಇಲ್ಲ ಎಂಬ ಆರೋಪ ದಶಕಗಳಿಂದಲೂ ಜಿಲ್ಲಾ ಮಟ್ಟದಲ್ಲಿ ಕೇಳಿಬರುತ್ತಿತ್ತು. ಇದೀಗ ಕರೊನಾ ಕಾರಣಕ್ಕೆ ಜಿಲ್ಲೆಗಳ ಜತೆಗೆ ತಾಲೂಕು ಆಸ್ಪತ್ರೆಗಳಲ್ಲೂ ಐಸೋಲೇಷನ್ ವಾರ್ಡ್​ಗಳ ವ್ಯವಸ್ಥೆ ಮಾಡಿರುವ ಪರಿಣಾಮ ವೆಂಟಿಲೇಟರ್ ಸಮಸ್ಯೆ ಬಗೆಹರಿದಿದೆ. ಬೆಂಗಳೂರು ಸೇರಿ ಒಂದೆರಡು ಜಿಲ್ಲೆಗಳಿಗೆ ಸೀಮಿತವಾಗಿದ್ದ ಸಾಂಕ್ರಾಮಿಕ ರೋಗಗಳ ತಪಾಸಣೆ ಸಾಮರ್ಥ್ಯ ಕೂಡ ಹೆಚ್ಚಾಗಿದೆ. ಕರೊನಾ ಕಾಲಿಟ್ಟ ಪ್ರಾರಂಭದಲ್ಲಿ ಪ್ರತಿದಿನ 1 ಸಾವಿರಕ್ಕಷ್ಟೇ ಸೀಮಿತ ವಾಗಿದ್ದ ಪರೀಕ್ಷಾ ಸಾಮರ್ಥ್ಯ 4 ಸಾವಿರ ತಲುಪಿದೆ. ನಿಮ್ಹಾನ್ಸ್, ಕಿದ್ವಾಯಿಗೆ ಮತ್ತಷ್ಟು ಉಪಕರಣ ಬರಲಿದ್ದು, ಸಾಮರ್ಥ್ಯ ಸದ್ಯದಲ್ಲೇ 10 ಸಾವಿರಕ್ಕೆ ಏರಿಕೆ ಆಗಲಿದೆ.

ಕರೊನಾ ದೃಢಪಟ್ಟಾಗ ಖಾಸಗಿ ಆಸ್ಪತ್ರೆ ಆಯ್ಕೆ ಮಾಡಿಕೊಂಡೆವು. ಬಳಿಕ ಚಿಕಿತ್ಸಾ ವೆಚ್ಚ ಭರಿಸಲಾಗದೆ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಗೊಂಡೆವು. ಅಲ್ಲಿಗೆ ಹೋದ ಮೇಲಷ್ಟೇ ಸರ್ಕಾರಿ ಆಸ್ಪತ್ರೆ ಬಗೆಗಿನ ನಮ್ಮ ಅಭಿಪ್ರಾಯ ತಪ್ಪು ಎಂಬುದು ಅರಿವಾಯಿತು. ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾಗಿದೆ, ಆಹಾರ ಉತ್ತಮವಾಗಿದೆ. ವೈದ್ಯ,ಸಿಬ್ಬಂದಿ ಸೇವೆ ಪ್ರಶಂಸನೀಯ.

| ಸೋಂಕುಮುಕ್ತ ದಂಪತಿ