ನ್ಯೂಸ್

ಕರೊನಾ ಬೂಸ್ಟರ್ ಡೋಸ್ ಆಗಿ ನಾಸಿಕ ಲಸಿಕೆ ನೀಡಿಕೆ?; ಭಾರತ್ ಬಯೋಟೆಕ್​ನಿಂದ ಸಿದ್ಧತೆ..

ನವದೆಹಲಿ: ಮೂಗಿನ ಮೂಲಕ ನೀಡಬಹುದಾದ ಕೋವಿಡ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಬಳಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ಭಾರತ್ ಬಯೋಟೆಕ್ ಹೇಳಿದೆ. ಕೊವ್ಯಾಕ್ಸಿನ್​ಗೆ ಹೋಲಿಸಿದರೆ ನಾಸಿಕ ಲಸಿಕೆಯ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸುವುದು ಸುಲಭ ಎಂದು ಸಂಸ್ಥೆ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕೃಷ್ಣ ಎಲ್ಲಾ ಬುಧವಾರ ಹೇಳಿದ್ದಾರೆ.

ನಿಗದಿತ ಡೋಸ್ ನಂತರವೂ ಸುರಕ್ಷತೆಗಾಗಿ ಹೆಚ್ಚುವರಿಯಾಗಿ ಲಸಿಕೆ ನೀಡುವುದಕ್ಕೆ ಬೂಸ್ಟರ್ ಡೋಸ್ ಎನ್ನುತ್ತಾರೆ. ಕೋವಿಡ್ ತಡೆಗೆ ಎರಡನೇ ಡೋಸ್ ಪಡೆದ ಆರು ತಿಂಗಳ ನಂತರ ಬೂಸ್ಟರ್ ಡೋಸ್​ಗೆ ಸೂಕ್ತ ಸಮಯವಾಗಿದೆ. ಭಾರತ್ ಬಯೋಟೆಕ್ ಜಗತ್ತಿನಲ್ಲೇ ಝಿಕಾ ವ್ಯಾಕ್ಸಿನ್ ಅಭಿವೃದ್ಧಿಪಡಿಸಿದ ಮೊದಲ ಕಂಪನಿ. ಪ್ರಧಾನಿ ನರೇಂದ್ರ ಮೋದಿಯವರೇ ಕೊವ್ಯಾಕ್ಸಿನ್ ಲಸಿಕೆ ಪಡೆದಿರುವುದು ಭಾರತೀಯ ವಿಜ್ಞಾನದಲ್ಲಿ ಹೊಂದಿರುವ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಇಡೀ ಜಗತ್ತು ನಾಸಿಕ ಲಸಿಕೆಯನ್ನು ಎದುರು ನೋಡುತ್ತಿದೆ. ಕರೊನಾ ಸೋಂಕು ಹರಡುವುದನ್ನು ತಡೆಯಲು ಇರುವ ಏಕೈಕ ಮಾರ್ಗ ಎಂದರೆ ಲಸಿಕೆ ಪಡೆಯುವುದು ಎಂದು ಅವರು ವಿವರಿಸಿದ್ದಾರೆ.

ದೇಶದಲ್ಲಿ 11,466 ಹೊಸ ಕೇಸ್: ಭಾರತದಲ್ಲಿ ಬುಧವಾರ ಕರೊನಾ ಸೋಂಕಿನ 11,466 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 3,43,88,579ಕ್ಕೆ ಏರಿದೆ. ಸಕ್ರಿಯ ಕೇಸ್ ಸಂಖ್ಯೆ 264 ದಿನಗಳ ಕನಿಷ್ಠಕ್ಕೆ, ಅಂದರೆ 1,39,683ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೈನಿಕ ಪಾಸಿಟಿವಿಟಿ ದರ ಶೇಕಡ 0.90 ಹಾಗೂ ಸಾಪ್ತಾಹಿಕ ದರ ಶೇ. 1.20 ಆಗಿದೆ.

ಲಸಿಕೆ ಪಡೆಯದವರಿಗೆ ರೇಷನ್, ಪೆಟ್ರೋಲ್ ಇಲ್ಲ!: ಶೇಕಡ ನೂರರಷ್ಟು ಲಸಿಕೆ ನೀಡಿಕೆ ಸಾಧನೆ ಮಾಡುವ ಉದ್ದೇಶದಿಂದ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲಾಡಳಿತ ಲಸಿಕೆ ಹಾಕಿಸಿಕೊಳ್ಳದವರಿಗೆ ಪಡಿತರ ಹಾಗೂ ಪೆಟ್ರೋಲ್ ಒದಗಿಸದಿರಲು ನಿರ್ಧರಿಸಿದೆ. ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ಪಡೆಯದವರಿಗೆ ಪೆಟ್ರೋಲ್, ಅಡುಗೆ ಅನಿಲ ಅಥವಾ ಪಡಿತರ ಸಾಮಗ್ರಿಗಳನ್ನು ನಿರಾಕರಿಸುವ ಕಠಿಣ ನೀತಿಯನ್ನು ಜಿಲ್ಲಾಡಳಿತ ಅಳವಡಿಸಿದೆ. ಲಸಿಕೆ ಪಡೆಯದವರು ಪ್ರವಾಸಿ ತಾಣಗಳಿಗೂ ಹೋಗುವಂತಿಲ್ಲ. ಅವರ ಓಡಾಟವನ್ನು ರಾಜ್ಯ ಮತ್ತು ಜಿಲ್ಲೆಗೆ ಸೀಮಿತಗೊಳಿಸಲಾಗಿದೆ. ಪ್ರವಾಸಿ ತಾಣಗಳಲ್ಲಿರುವ ಎಲ್ಲ ಹೋಟೆಲ್, ರೆಸಾರ್ಟ್ ಮತ್ತು ಅಂಗಡಿಗಳ ನೌಕರರು ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಹಾಂಕಾಂಗ್​ನಿಂದ ಮಾನ್ಯತೆ: ಹಾಂಕಾಂಗ್, ವಿಯೆಟ್ನಾಂ ದೇಶಗಳು ಕೊವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ನೀಡಿವೆ. ಈವರೆಗೆ 96 ದೇಶಗಳು ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ವ್ಯಾಕ್ಸಿನ್​ಗಳಿಗೆ ಮಾನ್ಯತೆ ನೀಡಿವೆ. ಡಬ್ಲ್ಯುಎಚ್​ಒ ನ.3ರಂದು ಅನುಮೋದನೆ ನೀಡಿತ್ತು.

ರಷ್ಯಾದಲ್ಲಿ ತುಸು ಇಳಿಕೆ: ರಷ್ಯಾದಲ್ಲಿ ಸೋಂಕಿನ ತೀವ್ರತೆ ಬುಧವಾರ ಸ್ವಲ್ಪ ಮಟ್ಟಿಗೆ ಇಳಿದಿದೆ. ದೇಶದಾದ್ಯಂತ 38,058 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಕರೊನಾ ವೈರಸ್ ಕಾರ್ಯಪಡೆ ತಿಳಿಸಿದೆ. ಮಂಗಳವಾರ 39,160 ಕೇಸ್​ಗಳು ವರದಿಯಾಗಿದ್ದವು.

80 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ: ಕರೊನಾ ಸಾಂಕ್ರಾಮಿಕತೆ ಸ್ಪೋಟಗೊಂಡಾಗಿ ನಿಂದ ಇದುವರೆಗೆ ಜಾಗತಿಕವಾಗಿ 80 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಗೆ ಕಾರಣವಾಗಿದೆ. ಆ ಪೈಕಿ 25,000 ಟನ್​ಗೂ ಅಧಿಕ ತ್ಯಾಜ್ಯ ಸಾಗರ ಗಳನ್ನು ಸೇರುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ. ಸಾಗರ ಸೇರುವ ಈ ತ್ಯಾಜ್ಯಗಳಲ್ಲಿ ಗಣನೀಯ ಭಾಗ ಮೂರ್ನಾಲ್ಕು ವರ್ಷಗಳಲ್ಲಿ ಕಡಲ ಕಿನಾರೆ ಅಥವಾ ದಂಡೆಗಳಲ್ಲಿ ರಾಶಿ ಬೀಳುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ‘ಪ್ರೊಸೀಡಿಂಗ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿದೆ. ಮುಖಗವಸು (ಮಾಸ್ಕ್), ಕೈಗವಸು ಮತ್ತು ಫೇಸ್ ಶೀಲ್ಡ್​ನಂಥ ಒಂ ದೇ ಬಾರಿ ಬಳಸುವಂಥ ಪ್ಲಾಸ್ಟಿಕ್ ಉತ್ಪನ್ನಗಳ ಬೇಡಿಕೆ ಹೆಚ್ಚಿಸಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇದರ ಪರಿಣಾಮವಾಗಿ ಪ್ಲಾಸ್ಟಿಕ್ ತ್ಯಾಜ್ಯ ಅಗಾಧವಾಗಿ ಏರಿಕೆಯಾಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.