ನ್ಯೂಸ್

ಪೊಲೀಸರಿಗೆ ಕಂಟಕವಾದ ಕರೊನಾ ಸೋಂಕು

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ದೇಶದ ಒಳಗಿನ ದುಷ್ಟ ಶಕ್ತಿಗಳ ವಿರುದ್ಧ ಹೋರಾಟ ನಡೆಸುವ ಜತೆ ಜತೆಗೆ ಈ ವರ್ಷ ಕರೊನ ಸೋಂಕಿನಿಂದ ಜನರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸರು ಪ್ರಾಣ ತ್ಯಾಗ ಮಾಡಿದ್ದಾರೆ. ಈ ವರ್ಷ ರಾಜ್ಯದಲ್ಲಿ 102 ಪೊಲೀಸರು ಮೃತಪಟ್ಟಿದ್ದು, ಇದರಲ್ಲಿ 85 ಮಂದಿ ಕರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ. 17 ಪೊಲೀಸರು ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾಗಿದ್ದಾರೆ.

ಉಗ್ರರು, ಕಳ್ಳರು, ದರೋಡೆಕೋರರು ಸೇರಿ ಸಮಾಜಘಾತುಕ ಶಕ್ತಿಗಳನ್ನು ಹೆಡೆಮುರಿಕಟ್ಟಿ ನಾಗರಿಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಆದರೆ, ಜಗತ್ತನ್ನೇ ಆವರಿಸಿದ ಸಾಂಕ್ರಮಿಕ ರೋಗ ಕೋವಿಡ್-19ನಲ್ಲಿ ದೇಶವೇ ಲಾಕ್​ಡೌನ್ ಆಗಿತ್ತು. ಪ್ರತಿಯೊಬ್ಬರು ಮನೆಯೊಳಗಿದ್ದರೆ ಖಾಕಿ ಪಡೆ ರಸ್ತೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸಿದ್ದರು. ಕರೊನಾ ವಾರಿಯರ್ಸ್ ಸಾಲಿನಲ್ಲಿ ಪೊಲೀಸರು ಮುಂಚೂಣಿಯಲ್ಲಿದ್ದರು.

ಲಾಕ್​ಡೌನ್ ಯಶಸ್ವಿಯಾಗಲು ಪೊಲೀಸ್ ಪಡೆ ತೋರಿದ ಸಮಯ ಪ್ರಜ್ಞೆ ಸ್ಮರಣೀಯ. ಕರೊನಾ ಸೋಂಕು ಪೊಲೀಸ್ ಇಲಾಖೆಯನ್ನು ಅಧಿಕವಾಗಿ ಬಾಧಿಸಿದ್ದು, ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಅಂಚಿನಲ್ಲಿದ್ದ ಪೊಲೀಸರನ್ನು ಇಲಾಖೆ ಕಳೆದುಕೊಂಡಿದೆ.

ಶಾಶ್ವತ ಸ್ಮಾರಕವಿಲ್ಲ

ಕೋರಮಂಗಲ ಕೆಎಸ್​ಆರ್​ಪಿ ಆವರಣದಲ್ಲಿ ಶಾಶ್ವತ ಸ್ಮಾರಕ ನಿರ್ಮಾಣ ಮಾಡಲು 6 ವರ್ಷಗಳ ಹಿಂದೆ ಗೃಹ ಸಚಿವರು ಘೋಷಣೆ ಮಾಡಿದ್ದರು. ಇಲ್ಲಿಯವರೆಗೂ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಗಮನ ಹರಿಸಿಲ್ಲ. ಅ.21ಕ್ಕೆ ಹುತಾತ್ಮರ ದಿನ ಆಚರಣೆಗೆ ಧ್ವಜಾರೋಹಣ, ಹುತಾತ್ಮರನ್ನು ಸ್ಮರಿಸಿ ಮರೆಯುವ ಸಂಪ್ರದಾಯ ಮುಂದುವರೆದಿದೆ.

ಪೊಲೀಸ್ ಹುತಾತ್ಮದಿನದ ಹಿನ್ನೆಲೆ

1959ರಲ್ಲಿ 10 ಪೊಲೀಸರು ಕೇವಲ ರೈಫಲ್​ನೊಂದಿಗೆ ಚೀನಾದ ಗಡಿ ಪ್ರದೇಶ ಲಡಾಖದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಾ ಪಡೆ ಭಾರತೀಯ ಪೊಲೀಸರ ಮೇಲೆ ದಾಳಿ ನಡೆಸಿದಾಗ ವೀರವೇಷದಿಂದ ಹೋರಾಟ ನಡೆಸಿ ಪ್ರಾಣಾರ್ಪಣೆ ಮಾಡಿದರು. ಈ ದಿನವನ್ನು ದೇಶದಲ್ಲಿ ಪೊಲೀಸರ ಹುತಾತ್ಮರ ದಿನವೆಂದು ಆಚರಿಸಲಾಗುತ್ತಿದೆ.

ಇಂದು ಸಂಸ್ಮರಣಾ ದಿನ

ಬುಧವಾರ (ಅ.21) ಮೈಸೂರು ರಸ್ತೆ ಸಿಎಆರ್ ಕೇಂದ್ರ ಸ್ಥಾನ ಆವರಣದಲ್ಲಿ ಬೆಳಗ್ಗೆ 8 ಗಂಟೆಗೆ ಪೊಲೀಸ್ ಸಂಸ್ಮರಣಾ ದಿನ ಏರ್ಪಡಿಸಲಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಜಿಪಿ ಪ್ರವೀಣ್ ಸೂದ್ ಹಾಗೂ ಹಿರಿಯ, ನಿವೃತ್ತ ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ.