ನ್ಯೂಸ್

ಕರೊನಾ ಮತ್ತು ವಿಚಾರಣಾಧೀನ ಕೈದಿಗಳ ಬಿಡುಗಡೆ

ಕರೊನಾ ಸೋಂಕಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಚಾರಣಾಧೀನ ಕೈದಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಜೈಲುಗಳಲ್ಲಿ ಕೈದಿಗಳು ಕಿಕ್ಕಿರಿದಿರುವುದರಿಂದ ವೈರಾಣು ಹಬ್ಬಿ ಆರೋಗ್ಯ ಸಮಸ್ಯೆ ಉಲ್ಬಣಿಸಬಹುದೆಂಬ ಕಾರಣದಿಂದ ಸುಪ್ರೀಂ ಕೋರ್ಟ್ ಈ ಕ್ರಮ ಕೈಗೊಂಡಿದೆ. ಪ್ರಸ್ತುತ ಸಾಂಕ್ರಾಮಿಕ ರೋಗವು, ನ್ಯಾಯದ ನಿರೀಕ್ಷೆಯಲ್ಲಿ ಜೈಲುಗಳಲ್ಲಿ ದೀರ್ಘ ಕಾಲ ಕೊಳೆಯುವ ವಿಚಾರಣಾಧೀನ ಕೈದಿಗಳ ದುಸ್ಥಿತಿ ಸಹಿತ ಭಾರತದ ಸೆರೆಮನೆಗಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಅವಕಾಶ ಕಲ್ಪಿಸಿದೆ.

ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸುತ್ತಿರುವ, ಆದರೆ ಆರೋಪಗಳ ಮೇಲೆ ಇನ್ನೂ ಶಿಕ್ಷೆ ವಿಧಿಸದಿರುವ ವಿಚಾರಣೆ ಎದುರಿಸುತ್ತಿರುವ ಬಂಧಿಗಳನ್ನು ವಿಚಾರಣಾಧೀನ ಕೈದಿಗಳೆನ್ನುತ್ತಾರೆ. ಅಪರಾಧಿ ಅಥವಾ ನಿದೋಷಿ ಎಂದು ಘೋಷಿಸುವ ಮುನ್ನ ‘ನ್ಯಾಯಾಂಗ ಕಸ್ಟಡಿಯಲ್ಲಿ’ ಇರಿಸಬೇಕೆಂದು ಕಾನೂನು ಹೇಳುತ್ತದಾದರೂ ವಿಚಾರಣಾಧೀನ ಕೈದಿಗಳನ್ನು ಜೈಲುಗಳಲ್ಲಿ ಇರಿಸುತ್ತಿರುವುದು ದುರಂತದ ಸಂಗತಿ.

ಆರೋಪಿಗಳು ಪಲಾಯನ ಮಾಡುವುದು ಅಥವಾ ಹೊರಗಿದ್ದಾಗ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು, ನಾಶ ಮಾಡುವುದನ್ನು ತಪ್ಪಿಸಲು ಅವರನ್ನು ವಿಚಾರಣಾಧೀನ ಕೈದಿಗಳನ್ನಾಗಿ ಇರಿಸಲಾಗುತ್ತದೆ. ಆದರೆ, ವಿಚಾರಣೆಯಲ್ಲಿ ವಿಳಂಬವಾಗಿ ಇಂಥ ಕೈದಿಗಳು ದೀರ್ಘಕಾಲ ಸೆರೆಮನೆಗಳಲ್ಲಿ ಕೊಳೆಯುವುದು ಮಾನವ ಹಕ್ಕುಗಳ ಉಲ್ಲಂಘನೆಗೂ ಕಾರಣವಾಗುತ್ತದೆ. ಇವರಲ್ಲಿ ಬಹುತೇಕ ಮಂದಿ ಬಡವರಾಗಿರುತ್ತಾರೆ. ಹಾಗೂ ಕಾನೂನಿನನ್ವಯ ಲಭ್ಯವಿರುವ ಹಕ್ಕುಗಳ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಇದಲ್ಲದೆ ಭ್ರಷ್ಟ ಆಡಳಿತ ವ್ಯವಸ್ಥೆಯೂ ಇಂಥ ಕೈದಿಗಳು ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಚಲಾಯಿಸಲು ಅಡ್ಡಿಯಾಗುತ್ತದೆ.

1973ರ ಅಪರಾಧ ದಂಡ ಸಂಹಿತೆಗೆ (ಸಿಆರ್​ಪಿಸಿ) 2005ರಲ್ಲಿ ತಿದ್ದುಪಡಿ ಮಾಡಿ ಸೆಕ್ಷನ್ 436ಎ ಅನ್ನು ಸೇರಿಸಲಾಯಿತು. ಒಂದು ವೇಳೆ ನಿರ್ದಿಷ್ಟ ಪ್ರಕರಣದಲ್ಲಿ ವಿಧಿಸಬಹುದಾದ ಶಿಕ್ಷೆಯ ಪ್ರಮಾಣದ ಅರ್ಧ ಭಾಗವನ್ನು ಸೆರೆಮನೆಯಲ್ಲಿ ಕಳೆದರೆ ವಿಚಾರಣಾಧೀನ ಕೈದಿಯನ್ನು ವೈಯಕ್ತಿಕ ಬಾಂಡ್ ಆಧಾರದಲ್ಲಿ ಬಿಡುಗಡೆ ಮಾಡಲು ಈ ಸೆಕ್ಷನ್ ಅವಕಾಶ ನೀಡುತ್ತದೆ. ಅರ್ಹ ವಿಚಾರಣಾಧೀನ ಕೈದಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಹಲವು ಆದೇಶಗಳನ್ನು ನೀಡಿದೆ. ಹಾಗೂ ವಿಚಾರಣಾಧೀನ ಕೈದಿಗಳ ಬಿಡುಗಡೆ ಪ್ರಕ್ರಿಯೆಗೆ ಕಟ್ಟುನಿಟ್ಟಾಗಿ ಉಸ್ತುವಾರಿ ವಹಿಸುವಂತೆ ಹೈಕೋರ್ಟ್​ಗಳು ಮತ್ತು ರಾಷ್ಟಿŠೕಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಿದೆ. ಬಹುತೇಕ ವಿಚಾರಣಾಧೀನ ಕೈದಿಗಳು ಸಣ್ಣಪುಟ್ಟ (ಮೈನರ್) ಅಪರಾಧಗಳಲ್ಲಿ ಆರೋಪಿಗಳಾಗಿ ಇರುವುದರಿಂದ ಅವರನ್ನು ಬಾಂಡ್ ಮೇಲೆ ಬಿಡುಗಡೆಗೆ ಅವಕಾಶ ನೀಡಲಾಗುತ್ತದೆ. ಆದರೂ 436 ಮತ್ತು 436ಎ ಸೆಕ್ಷನ್ ಅಡಿಯ ಪ್ರಕರಣಗಳಿಗೆ ಸಾಕಷ್ಟು ಗಮನ ನೀಡಲು ವ್ಯವಸ್ಥೆ ವಿಫಲವಾಗಿದೆ. ಹೀಗಾಗಿ ಸೆರೆಮನೆಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ವಿಚಾರಣಾಧೀನ ಕೈದಿಗಳ ಸ್ಥಿತಿ: ಕೇಂದ್ರ ಗೃಹ ಸಚಿವಾಲಯ ಅಧೀನದ ರಾಷ್ಟಿŠೕಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) 2018ರಲ್ಲಿ ಸಿದ್ಧಪಡಿಸಿರುವ ‘ಭಾರತ ಸೆರೆಮನೆಗಳ ಅಂಕಿಸಂಖ್ಯೆ’ ಪ್ರಕಾರ ಭಾರತದ ಜೈಲುಗಳಲ್ಲಿ 2.8 ಲಕ್ಷಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿದ್ದಾರೆ. ಅಂದರೆ ದೇಶದ ಸೆರೆಮನೆಗಳಲ್ಲಿರುವ ಒಟ್ಟು ಕೈದಿಗಳ ಪೈಕಿ ಮೂರನೇ ಎರಡಕ್ಕಿಂತ ಹೆಚ್ಚು ಅಂದರೆ ಶೇಕಡ 69ರಷ್ಟು ವಿಚಾರಣಾಧೀನ ಕೈದಿಗಳಿದ್ದಾರೆ. ಕರ್ನಾಟಕದ ಸೆರೆಮನೆಗಳಲ್ಲೇ ಹತ್ತು ಸಾವಿರ ವಿಚಾರಣಾಧೀನ ಕೈದಿಗಳಿದ್ದಾರೆ. ವಿಚಾರಣಾಧೀನ ಕೈದಿಗಳ ಸ್ಥಿತಿಗತಿ ಪರಿಶೀಲನೆಗೆ ದೇಶದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ಮ್ಯಾಜಿಸ್ಟೆŠೕಟ್ ಮತ್ತು ಜಿಲ್ಲಾ ರಕ್ಷಣಾಧಿಕಾರಿ (ಎಸ್​ಪಿ) ಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಬೇಕೆಂದು ತನ್ನ ತೀರ್ಪಿನಲ್ಲಿ ಗೃಹ ಸಚಿವಾಲಯಕ್ಕೆ ಸುಪ್ರೀಂ ಕೊರ್ಟ್ ನಿರ್ದೇಶಿಸಿದ್ದರೂ ಈ ಪರಿಸ್ಥಿತಿ ಇದೆ. 436ಎ ಸೆಕ್ಷನ್​ನ ಲಾಭ ಪಡೆಯಲು ಅರ್ಹರಾಗುವ ವಿಚಾರಣಾಧೀನ ಕೈದಿಗಳ ಬಿಡುಗಡೆಗೆ ಶಿಫಾರಸು ಮಾಡುವುದು ಈ ಸಮಿತಿಗಳ ಕರ್ತವ್ಯ.

ಭಾರತೀಯ ಜೈಲುಗಳಲ್ಲಿನ ದಟ್ಟಣೆ ಕಡಿಮೆ ಮಾಡಲು ಹಾಗೂ ವಿಚಾರಣಾಧೀನ ಕೈದಿಗಳ ಸಂಖ್ಯೆ ಕಡಿಮೆ ಮಾಡಲು ಕಳೆದೆರಡು ದಶಕಗಳಿಂದ ಬಹಳ ಪ್ರಯತ್ನಗಳು ನಡೆಯುತ್ತಿವೆ. ಫಾಸ್ಟ್​ಟ್ರ್ಱಾಕ್ ಕೋರ್ಟ್​ಗಳ ಸ್ಥಾಪನೆ ಹಾಗೂ ಕೋರ್ಟ್ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದ್ದರೂ ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ವಿಶ್ವಸಂಸ್ಥೆ ನಿಯಮ: ಅಪರಾಧ ತಡೆ ಮತ್ತು ಅಪರಾಧಿಗಳನ್ನು ನೋಡಿಕೊಳ್ಳುವುದಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಪ್ರಥಮ ಅಧಿವೇಶನ ಅಂಗೀಕರಿಸಿದ ನಿಯಮಗಳ ಪ್ರಕಾರ ವಿಚಾರಣಾಧೀನ ಕೈದಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಪ್ರತ್ಯೇಕ ಕೊಠಡಿ ಸೇರಿ ಮೂಲಸೌಕರ್ಯ ಒದಗಿಸಬೇಕು. ಇದಕ್ಕೆ ಪೂರಕ ಎನ್ನುವಂತೆ, ಭಾರತದ ಸಂವಿಧಾನದ 21ನೇ ವಿಧಿ ಗೌರವಯುತ ಹಾಗೂ ನಾಗರಿಕ ಜೀವನ ನಡೆಸುವ ಅವಕಾಶವನ್ನು ಖಾತರಿಪಡಿಸುತ್ತದೆ. ಆಹಾರ, ನೀರು, ಗೌರವಯುತ ವಾತಾವರಣ, ಶಿಕ್ಷಣ, ವೈದ್ಯಕೀಯ ಆರೈಕೆ ಮತ್ತು ವಸತಿ ಇವುಗಳನ್ನು ಮೂಲಭೂತ ಮಾನವ ಹಕ್ಕುಗಳೆಂದು ಪರಿಗಣಿಸಲಾಗಿದೆ. ಯಾವುದೇ ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಎಲ್ಲ ಸೌಲಭ್ಯಗಳು ಇರಬೇಕು ಹಾಗೂ ನಿರ್ಬಂಧಗಳಿಂದ ಮುಕ್ತರಾಗಿರಬೇಕು.

ಸಾಮಾನ್ಯವಾಗಿ ಕೈದಿಗಳಿಗೆ ಎಲ್ಲ ಸ್ವಾತಂತ್ರ್ಯ ಲಭ್ಯವಾಗುವುದಿಲ್ಲವಾದರೂ ಟಿ.ವಿ. ವಾದೀಶ್ವರನ್ ವರ್ಸಸ್ ತಮಿಳುನಾಡು ರಾಜ್ಯ ಪ್ರಕರಣದಲ್ಲಿ 14, 19 ಮತ್ತು 21ನೇ ವಿಧಿಯನ್ವಯ ಅವರಿಗೆ ಹಕ್ಕುಗಳು ಲಭ್ಯವಾಗುತ್ತವೆ. ಆದರೆ, ಭಾರತದಲ್ಲಿನ ಜೈಲುಗಳ ಸ್ಥಿತಿ ಶೋಚನೀಯವಾಗಿದೆ. 650 ಜನರು ಇರಬೇಕಾದ ಬಂದೀಖಾನೆಗಳಲ್ಲಿ 2,250 ಕೈದಿಗಳಿರುತ್ತಾರೆ. ಆ ಪೈಕಿ ಮೂರನೇ ಎರಡರಷ್ಟು ಮಂದಿ ವಿಚಾರಣಾಧೀನ ಕೈದಿಗಳಿರುತ್ತಾರೆ. ಮೂಲಭೂತ ಮಾನವ ಹಕ್ಕುಗಳು ಆಹಾರ, ನೀರು, ಸ್ಥಳಾವಕಾಶ, ಒಳ್ಳೆ ನಿದ್ದೆ ಅಥವಾ ವಸತಿ ಇವುಗಳನ್ನು ಒಳಗೊಂಡಿರುತ್ತವೆ. ಭಾರತದ ಜೈಲುಗಳಲ್ಲಿ ಇವುಗಳನ್ನು ನಿರಾಕರಿಸಲಾಗುತ್ತಿದೆ. ಕ್ರಿಮಿನಲ್ ನ್ಯಾಯಶಾಸ್ತŠದ ಮೂಲಭೂತ ತತ್ತ್ವವು ಒಬ್ಬ ಆರೋಪಿ ತಪ್ಪಿತಸ್ಥ ಎಂದು ಸಾಬೀತಾಗುವವರೆಗೆ ಅವರು ನಿರಪರಾಧಿ ಎಂದೇ ಪರಿಗಣಿಸುತ್ತದೆ. ವಿಚಾರಣಾಧೀನ ಕೈದಿಗಳಿಗೆ ಸ್ವಾತಂತ್ರ್ಯದ ಹಕ್ಕು ನೀಡದೆ ಸೆರೆಮನೆಯಲ್ಲಿ ಕೂಡಿ ಹಾಕುವ ಮೂಲಕ ಆರೋಪಿಯನ್ನು ಹಾಲಿ ವ್ಯವಸ್ಥೆ ಶಿಕ್ಷೆಗೆ ಒಳಪಡಿಸುತ್ತಿದೆ. ನಿರ್ಲಕ್ಷಿತ ಜನವಿಭಾಗವಾದ ವಿಚಾರಣಾಧೀನ ಕೈದಿಗಳ ಸಂಕಷ್ಟ ಕಡಿಮೆ ಮಾಡುವ ನಿಟ್ಟಿನಲ್ಲಿ ಪೊಲೀಸರು, ನ್ಯಾಯಾಂಗ, ಪ್ರಾಸಿಕ್ಯೂಷನ್, ಪ್ರತಿವಾದಿ ವಕೀಲರು ಮತ್ತು ಸೆರೆಮನೆ ಇಲಾಖೆ ಆದಿಯಾಗಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಸಂಬಂಧಪಟ್ಟ ಎಲ್ಲರೂ ಸೂಕ್ತ ಹಾಗೂ ಸತತ ಪ್ರಯತ್ನಗಳನ್ನು ಮಾಡಬೇಕಿದೆ.

ಸಾಂಕ್ರಾಮಿಕ ರೋಗ ಭೀತಿ: ಕರೊನಾ ಸೋಂಕು ಹರಡುವ ಮತ್ತು ಅದರ ಮಾರಕ ಪರಿಣಾಮವನ್ನು ಪರಿಗಣಿಸಿ ಹಾಗೂ ಭಾರತದ ಸೆರೆಮನೆಗಳ ಪರಿಸ್ಥಿತಿಯನ್ನು ಅನುಲಕ್ಷಿಸಿದ ಸುಪ್ರೀಂ ಕೋರ್ಟ್ ಸ್ವಪ್ರೇರಣೆಯಿಂದ ವಿಚಾರ ಕೈಗೆತ್ತಿಕೊಂಡು ಜೈಲುಗಳು ವಿಚಾರಣಾಧೀನ ಕೈದಿಗಳ ಸಹಿತ ಎಲ್ಲ ಬಂಧಿಗಳ ನಡುವಿನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಗರಿಷ್ಠ ಪ್ರಮಾಣದಲ್ಲಿ ಖಾತರಿಪಡಿಸಬೇಕೆಂದು ನಿರ್ದೇಶನ ನೀಡಿದೆ. ಜೈಲುಗಳಲ್ಲಿ ಕಿಕ್ಕಿರಿದು ಕೈದಿಗಳಿರುವುದು, ಅದರಲ್ಲೂ ವಿಶೇಷವಾಗಿ ಕರೊನಾ ಹಾವಳಿಯ ಈ ಸಂದರ್ಭದಲ್ಲಿ, ತೀರಾ ಆತಂಕದ ವಿಷಯವೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಸಂವಿಧಾನದ 21ನೇ ವಿಧಿಯ ಬಳಕೆ ಮಾಡಿರುವ ಅದು, ಜೈಲುಗಳಲ್ಲಿ ಕರೊನಾ ವೈರಸ್ ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದೆ.

ಯಾವ ವಿಭಾಗದ ಕೈದಿಗಳನ್ನು ಬಿಡುಗಡೆ ಮಾಡಬಹುದೆಂದು ನಿರ್ಧರಿಸಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರು ಸಹಿತ ಉನ್ನತ ಅಧಿಕಾರಿಗಳ ಸಮಿತಿಯೊಂದನ್ನು ರಚಿಸುವಂತೆ ಅದು ನಿರ್ದೇಶಿಸಿದೆ. ಕರ್ನಾಟಕದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗಿದೆ. ಜಿಲ್ಲಾ ಮಟ್ಟಗಳಲ್ಲಿ ಕೂಡ ಸಮಿತಿಗಳನ್ನು ರಚಿಸಲಾಗಿದೆ. ಕರೊನಾ ವೈರಸ್ ಹರಡುವುದನ್ನು ತಡೆಯುವ ದಿಸೆಯಲ್ಲಿ ಸೆರೆಮನೆಗಳಲ್ಲಿ ಜನರ ಸಂಖ್ಯೆ ಕಡಿಮೆ ಮಾಡಲಿಕ್ಕಾಗಿ ವಿಚಾರಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಲು ಕರ್ನಾಟಕ ಹೈಕೋರ್ಟ್ ಸಂಬಂಧಪಟ್ಟ ನ್ಯಾಯಾಧೀಶರುಗಳಿಗೆ ಅಧಿಕಾರ ನೀಡಿದೆ. ಇದಕ್ಕೆ ಅನುಸಾರವಾಗಿ, ರಾಜ್ಯದಲ್ಲಿ ಈಗಾಗಲೇ 200 ವಿಚಾರಣಾಧೀನ ಕೈದಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಸುಪ್ರೀಂ ಕೋರ್ಟ್ ಸಂವಿಧಾನದ 21ನೇ ವಿಧಿ ಮತ್ತು ಘನತೆಯ ಜೀವನದ ಮಹತ್ವವನ್ನು ಪದೇಪದೆ ಒತ್ತಿ ಹೇಳಿದೆ. ಸೆರೆಮನೆಗಳಲ್ಲೂ ಅದನ್ನು ಸಾಧ್ಯವಾದಷ್ಟೂ ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಇರಬೇಕು. ಇಲ್ಲದಿದ್ದರೆ 21ನೇ ವಿಧಿಯ ಆಶಯ ವ್ಯರ್ಥವಾದಂತೆಯೇ ಸರಿ. ಆದ್ದರಿಂದ ಕೈದಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಹೊಣೆಗಾರಿಕೆಯಿಂದ ರಾಜ್ಯ ಸರ್ಕಾರ ತಪ್ಪಿಸಿಕೊಳ್ಳುವಂತಿಲ್ಲ. ಅದನ್ನು ಕಲ್ಪಿಸಲು ರಾಜ್ಯ ಸರ್ಕಾರ ಅಸಮರ್ಥವಾದರೆ, ಜಾಮೀನು ಅರ್ಜಿ ವಿರೋಧಿಸುವ ಅಧಿಕಾರ ಅವುಗಳಿಗೆ ಇರುವುದಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಸಾಧ್ಯವಾದಷ್ಟು ಬೇಗ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಬೇಕು.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)