ನ್ಯೂಸ್

ಆರೋಗ್ಯಕ್ಕೆ ಸೇತು: ಇದುವರೆಗೆ ಎಷ್ಟು ಜನ ಈ ಆ್ಯಪ್​ ಡೌನ್​ಲೋಡ್ ಮಾಡಿಕೊಂಡಿದ್ದಾರೆ ಗೊತ್ತಾ?

ಕರೊನಾ ವೈರಸ್ ವ್ಯಾಪಿಸುವುದನ್ನು ತಡೆಯುವ ಕ್ರಮವಾಗಿ ಲಾಕ್​ಡೌನ್ ಘೊಷಿಸಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ, ‘ಆರೋಗ್ಯ ಸೇತು’ ಮೊಬೈಲ್ ಆಪ್ ಡೌನ್​ಲೋಡ್ ಮಾಡಿಕೊಳ್ಳುವಂತೆ ದೇಶದ ಜನರಿಗೆ ಕರೆ ನೀಡಿದ್ದರು. ನಮ್ಮ ಸಮೀಪದಲ್ಲಿ ಕೋವಿಡ್-19 ಪಾಸಿಟಿವ್ ವ್ಯಕ್ತಿಗಳು ಇದ್ದಾರೆಯೇ ಎಂದು ಈ ಆಪ್ ಮೂಲಕ ತಿಳಿಯಬಹುದು.

ಆರೋಗ್ಯ ಸೇತು ಆಪ್ ಖಾಸಗಿತನದ ಉಲ್ಲಂಘನೆಗೆ ದಾರಿ ಮಾಡುತ್ತದೆ ಹಾಗೂ ಕಣ್ಗಾವಲು ಇಡಲು ನೆರವಾಗುತ್ತದೆ ಎಂಬುದು ಡಿಜಿಟಲ್ ಹಕ್ಕುಗಳ ತಜ್ಞರ ಅಭಿಪ್ರಾಯ. ಡಿಜಿಟಲ್ ಹಕ್ಕುಗಳ ಸಂಘಟನೆಯಾದ ಇಂಟರ್​ನೆಟ್ ಫ್ರೀಡಂ ಫೌಂಡೇಶನ್, ಈ ಆಪ್ ‘ಖಾಸಗಿ ಮಾಹಿತಿಯ ಗಣಿ’ ಎಂದು ವರ್ಣಿಸಿದೆ. ನಿಯಂತ್ರಣ ಕನಿಷ್ಠೀಕರಣ (ಮಿನಿಮೈಸೇಶನ್), ಕಟ್ಟುನಿಟ್ಟು ಉದ್ದೇಶದ ಮಿತಿ, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯ ಅಂಶಗಳಿಗೆ ಅದು ಬದ್ಧವಾಗಿಲ್ಲ ಎನ್ನುವುದು ಅವರ ವಾದ. ಆದರೆ ಕೇಂದ್ರ ಸರ್ಕಾರ ಇದನ್ನು ತಳ್ಳಿಹಾಕಿದೆ. ಡೇಟಾವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

5 ಕೋಟಿ ಡೌನ್​ಲೋಡ್

  • ಐದು ಕೋಟಿಗೂ ಹೆಚ್ಚು ಜನರು ಆಂಡ್ರಾಯ್ಡ್​ ಮತ್ತು ಐಫೋನ್​ಗಳಲ್ಲಿ ಆರೋಗ್ಯ ಸೇತುವನ್ನು ಡೌನ್​ಲೋಡ್ ಮಾಡಿಕೊಂಡಿದ್ದಾರೆ.
  • ಗೂಗಲ್ ಪ್ಲೇ ಮತ್ತು ಆಪಲ್ ಸ್ಟೋರ್​ನಲ್ಲಿ ಲಭ್ಯ.
  • ಭಾರತದ 11 ಭಾಷೆಗಳಲ್ಲಿ ಲಭ್ಯ.
ಉಪಯೋಗ ಏನು?
  1. ಆಪನ್ನು ಮೊಬೈಲ್ ಫೋನ್​ನಲ್ಲಿ ಡೌನ್​ಲೋಡ್ ಮಾಡಿಕೊಂಡಾಗ, ನಿಮಗೆ ಕೆಮ್ಮು, ಜ್ವರ ಅಥವಾ ಉಸಿರಾಟದಲ್ಲಿ ತೊಂದರೆ ಮತ್ತಿತರ ಸಮಸ್ಯೆಯಿದೆಯೇ ಎಂದು ಬಳಕೆದಾರರಿಗೆ ಕೇಳುತ್ತದೆ. ನಿಮಗೆ ಇಂಥ ಯಾವುದೇ ಸಮಸ್ಯೆ ಇಲ್ಲವೆಂದರೆ ನೀವು ಪ್ರಸ್ತುತ ಸುರಕ್ಷಿತ ಎಂದರ್ಥ.
  2. ಬ್ಲೂಟೂತ್ ಮತ್ತು ಲೊಕೇಷನ್ ಡಿವೈಸ್​ಗಳನ್ನು ಸದಾ ಸಕ್ರಿಯವಾಗಿಡಬೇಕು.
  3. ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಿದಾಗ ಹತ್ತಿರದ ಮೊಬೈಲ್ ಫೋನ್​ಗಳಿಂದ ಸಂದೇಶ ಬರುತ್ತಿರುತ್ತದೆ. ಸಮೀಪ ನಿಂತವರಲ್ಲಿ ಸೋಂಕು ಇಲ್ಲದೆ ನಾರ್ಮಲ್ ಇದ್ದರೆ ಹಸಿರು ವಲಯ ತೋರಿಸುತ್ತದೆ. ಒಂದು ವೇಳೆ ಅದೇ ವ್ಯಕ್ತಿ 10 ದಿನಗಳ ನಂತರ ಕರೊನಾ ಪಾಸಿಟಿವ್ ಆದರೆ ಆರೋಗ್ಯ ಸೇತು ಆಪ್ ನಿಮ್ಮನ್ನು ಎಚ್ಚರಿಸುತ್ತದೆ.
  4. ಅಂಥ ಸಂದರ್ಭದಲ್ಲಿ ಬಳಕೆದಾರರು ತಪಾಸಣೆ ಮಾಡಿಸಿಕೊಳ್ಳಬಹುದು.
  5. ಹಾಟ್​ಸ್ಪಾಟ್​ಗಳ ಬಗ್ಗೆಯೂ ಮಾಹಿತಿ ನೀಡುವುದರಿಂದ ಬಳಕೆದಾರರು ಪ್ರಯಾಣದ ಮಾರ್ಗ ಬದಲಾಯಿಸಬಹುದು.
  6. ಸಮೀಪದಲ್ಲಿ ಪಾಸಿಟಿವ್ ರೋಗಿಗಳಿದ್ದರೆ ಅದರ ಬಗ್ಗೆ ಅಲರ್ಟ್ ಸಂದೇಶ ಕಳಿಸುವುದಲ್ಲದೆ ಸ್ವಯಂ ಐಸೋಲೇಷನ್ ಮಾಡಿಕೊಳ್ಳುವುದು ಹೇಗೆ ಎಂಬ ಸೂಚನೆ ನೀಡುತ್ತದೆ. ಸೋಂಕಿನ ಲಕ್ಷಣ ಕಂಡುಬಂದರೆ ಏನು ಮಾಡಬೇಕು ಎಂಬ ಮಾರ್ಗದರ್ಶನವನ್ನೂ ನೀಡುತ್ತದೆ.
  7. ಡೇಟಾ ಸರ್ಕಾರದೊಂದಿಗೆ ಮಾತ್ರ ಹಂಚಿಕೆ ಆಗುತ್ತದೆ. ಬಳಕೆದಾರರ ಹೆಸರಾಗಲೀ ಮೊಬೈಲ್ ಸಂಖ್ಯೆಯಾಗಲೀ ಸಾರ್ವಜನಿಕವಾಗಿ ಬಹಿರಂಗಗೊಳ್ಳದು.
 ಕಡ್ಡಾಯಗೊಳಿಸಿದ ಸರ್ಕಾರ

ಆಹಾರ, ಇನ್ನಿತರ ಸೇವಾ ಪೂರೈಕೆದಾರರಿಗೆ ಈ ಆಪನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸರ್ಕಾರದ ನೌಕರರಿಗೂ ಕಡ್ಡಾಯ. ದೇಶವ್ಯಾಪಿ ಲಾಕ್​ಡೌನ್ ತೆರವು ಮಾಡಿದ ನಂತರ ಸಾರ್ವಜನಿಕ ಸಾರಿಗೆಗಳಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಇದನ್ನು ಕಡ್ಡಾಯಗೊಳಿಸುವ ಸಂಭವವಿದೆ.

ಸರ್ವರ್​ಗೆ ರವಾನೆ

ಡೌನ್​ಲೋಡ್ ಬಳಿಕ ನಾವು ನೀಡುವ ಪ್ರತಿಕ್ರಿಯೆ ಆಧಾರದಲ್ಲಿ ಆ ವ್ಯಕ್ತಿಗೆ ಕೋವಿಡ್-19 ಸೋಂಕಿನ ಲಕ್ಷಣವಿರುವುದು ಕಂಡು ಬಂದರೆ ಆ ಮಾಹಿತಿ ಸರ್ಕಾರದ ಸರ್ವರ್​ಗೆ ರವಾನೆಯಾಗುತ್ತದೆ. ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಅಗತ್ಯವಿದ್ದರೆ ಐಸೋಲೇಷನ್ ಪ್ರಕ್ರಿಯೆ ಆರಂಭಿಸಲು ಇದರಿಂದ ಸರ್ಕಾರಕ್ಕೆ ನೆರವಾಗುತ್ತದೆ.

ಬಳಕೆ ಹೇಗೆ?
  • ಆಪ್ ಓಪನ್ ಆದ ಮೇಲೆ ತೆರೆಯ ಮೇಲೆ ಸೂಚಿಸಿದಂತೆ ನಿಮ್ಮ ಮೊಬೈಲ್​ನ ಲೊಕೇಷನ್ ಪಡೆಯಲು ಅನುಮತಿ ನೀಡಿ.
  • ಆಗ ನಿಮಗೊಂದು ಓಟಿಪಿ ಬರುತ್ತದೆ. ಅದನ್ನು ಎಂಟರ್ ಮಾಡಿದಾಗ ಆನ್ ಆಗುತ್ತದೆ.
  • ಆಯ್ಕೆಗಳಲ್ಲಿ ನಿಮ್ಮ ಲಿಂಗ ನಮೂದಿಸಿ.
  • ಪೂರ್ಣ ಹೆಸರು, ವಯಸ್ಸು ಮತ್ತು ವೃತ್ತಿ ಮಾಹಿತಿ ನೀಡಿ