ಭದ್ರಾವತಿ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಹಾನಿ ತಡೆಗಟ್ಟಲು ವಿಪತ್ತು ನಿರ್ವಹಣಾ ತಂಡವನ್ನು ರಚಿಸಿಕೊಂಡು ಅಗತ್ಯ ಮಾಹಿತಿ ಸಂಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕೆಂದು ತಹಸೀಲ್ದಾರ್ ಪರುಸಪ್ಪ ಕುರುಬರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ ನಗರಸಭೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಪಿಡಿಒಗಳಿಗೆ ಸೋಮವಾರ ಏರ್ಪಡಿಸಿದ್ದ ವಿಪತ್ತು ನಿರ್ವಹಣಾ ಸಭೆಯಲ್ಲಿ ಮಾತನಾಡಿದರು.
ಗ್ರಾಪಂ ವ್ಯಾಪ್ತಿಯ ಅಧಿಕಾರಿಗಳು ವಿಪತ್ತು ನಿರ್ವಹಣಾ ಸಮಿತಿ ರಚಿಸಿಕೊಂಡು ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆ, ಹಾಸ್ಟೆಲ್ ಮುಂತಾದವುಗಳನ್ನು ಗುರುತಿಸಿ ಆಗಬಹುದಾದ ತೊಂದರೆಗಳನ್ನು ಮೇಲಧಿಕಾರಿಗಳಿಗೆ ತಿಳಿಸಬೇಕು. ಮರದ ರೆಂಬೆ, ಕೊಂಬೆಗಳು ಬೀಳುವಂತಿದ್ದರೆ ಅವುಗಳ ಮಾಹಿತಿಯನ್ನು ಅರಣ್ಯ, ವಿದ್ಯುತ್ ಇಲಾಖೆಗೆ ಮಾಹಿತಿ ನೀಡಬೇಕು. ರಸ್ತೆ ಅಥವಾ ಸೇತುವೆ ಮುಳುಗುವ ಸಾಧ್ಯತೆ ಕಂಡುಬಂದರೆ ಹಾಗೂ ಕೆರೆ ಕೋಡಿ ಒಡೆಯುವ ಸಾಧ್ಯತೆಯಿದ್ದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಒಂದು ವೇಳೆ ಮಾಹಿತಿ ನೀಡುವಲ್ಲಿ ವಿಲರಾದರೆ ಅಧಿಕಾರಿ ಸಿಬ್ಬಂದಿಯನ್ನೇ ಹೊಣೆ ಮಾಡಿ ಶಿಸ್ತುಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಡೆಂೆ, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಾಲೂಕಿನಲ್ಲಿ ರೋಗ ಉಲ್ಬಣಿಸದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ನಾಗರಿಕರು ತಾಲೂಕು ಕಚೇರಿಯಲ್ಲಿ ಆರಂಭಿಸಿರುವ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ತಾಪಂ ಇಒ ಗಂಗಣ್ಣ ಮಾತನಾಡಿ, ಮಳೆ ಬಂದರೆ ತಾಲೂಕಿನಲ್ಲಿರುವ ಶಾಲೆಗಳಲ್ಲಿ ತರಗತಿ ನಡೆಸಲು ಸಾಧ್ಯತೆಯಿದೆಯೇ ಅಥವಾ ಪರ್ಯಾಯ ವ್ಯವಸ್ಥೆ ಏನು ಮಾಡಬಹುದು ಎಂಬುದನ್ನು ಪಿಡಿಒಗಳಿಗೆ ಮುಂಚಿತವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಬೇಕು. ವಿಪತ್ತು ನಿರ್ವಹಣಾ ತಂಡದವರು ಆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು.
ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಣ್ಣನವರ್, ಬಿಇಒ ಎ.ಕೆ.ನಾಗೇಂದ್ರಪ್ಪ, ಕಂದಾಯ ಅಧಿಕಾರಿ ಪ್ರಶಾಂತ್, ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು, ಗ್ರಾಮಲೆಕ್ಕಿಗರು ಭಾಗವಹಿಸಿದ್ದರು.