ಮಂಗಳೂರಿನ ಪಂಪುವೆಲ್ ಗಣೇಶಪುರ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮಂದಿರದಲ್ಲಿ ವಿಶೇಷ ಸಹಕಾರ ಸಪ್ತಾಹ ಆಚರಣೆಯ ಅಂಗವಾಗಿ ಸಹಕಾರ ಜಾಗೃತ ಕಾರ್ಯಕ್ರಮವನ್ನು ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್ ಉದ್ಘಾಟಿಸಿದರು.  
ನ್ಯೂಸ್

ಸಿಎಸ್‌ಸಿ ಸೇವೆ ಮೂಲಕ ಸಹಕಾರ ಸಂಘಗಳು ಡಿಜಿಟಲ್ ಸೇವಾ ಕೇಂದ್ರಗಳಾಗಿ ಬೆಳೆಯಲು ಸಾಧ್ಯ

ಮಂಗಳೂರು: ಸಿಎಸ್‌ಸಿ ಸೇವೆ ಮೂಲಕ ಸಹಕಾರ ಸಂಘಗಳು ಡಿಜಿಟಲ್ ಸೇವಾ ಕೇಂದ್ರಗಳಾಗಿ ಬೆಳೆಯಲು ಸಾಧ್ಯವಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್ ಹೇಳಿದರು.
ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯಾಗಿ 5 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಸಹಕಾರ ಇಲಾಖೆ ಮಂಗಳೂರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು, ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬಂಟ್ವಾಳ ತಾಲೂಕು, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಇದರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮಂಗಳೂರಿನ ಪಂಪುವೆಲ್ ಗಣೇಶಪುರ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮಂದಿರದಲ್ಲಿ ವಿಶೇಷ ಸಹಕಾರ ಸಪ್ತಾಹ ಆಚರಣೆಯ ಅಂಗವಾಗಿ ಸಹಕಾರ ಜಾಗೃತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಗಳ ಮೂಲಕ ರೈತರ, ಮಹಿಳೆಯರ ಮತ್ತು ಸಾಮಾನ್ಯ ಜನರ ಆರ್ಥಿಕ ಸಬಲೀಕರಣ ಸಾಧ್ಯ. ಆಧಾರ್ ಕಾರ್ಡು, ಪ್ಯಾನ್, ವಿದ್ಯುತ್ ಬಿಲ್ ಪಾವತಿ, ವಿಮೆ ಹಾಗೂ ಇನ್ನಿತರ ಹಲವಾರು ಸರಕಾರಿ ಮತ್ತು ಖಾಸಗಿ ಸೇವೆಗಳನ್ನು ಕಾಮನ್ ಸರ್ವೀಸ್ ಸೆಂಟರ್ (ಸಿಎಸ್‌ಸಿ) ಮೂಲಕ ಸಾಮಾನ್ಯ ಜನತೆಗೆ ಒದಗಿಸುವುದರಿಂದ ಸಹಕಾರ ಸಂಘಗಳು ಡಿಜಿಟಲ್ ಸೇವಾ ಕೇಂದ್ರಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ ಮತ್ತು ಆ ಮೂಲಕ ಸಹಕಾರದಿಂದ ಸಮೃದ್ಧಿ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಎ.ಸುರೇಶ್ ರೈ ಮಾತನಾಡಿ, ಭಾರತ ಸರ್ಕಾರವು 6ನೇ ಜುಲೈ 2021ರಂದು ಸ್ಥಾಪಿಸಿರುವ ಸಹಕಾರ ಸಚಿವಾಲಯ ದೇಶದಲ್ಲಿ ಸಹಕಾರ ಚಳುವಳಿಯನ್ನು ಬಲ ಪಡಿಸುವ ಕಾರ್ಯವನ್ನು ಮಾಡುತ್ತಿದೆ. ತಂತ್ರಜ್ಞಾನಗಳು ಎಷ್ಟೇ ವೇಗವಾಗಿ ಸಾಗಿದರೂ, ಗ್ರಾಮೀಣ ಪ್ರದೇಶದ ಜನರಿಗೆ ಡಿಜಿಟಲಿ ಸಾಕ್ಷರತೆಯ ಅರಿವನ್ನು ಮೂಡಿಸಬೇಕಾಗಿದೆ ಎಂದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಅಶೋಕ್ ಕುಮಾರ್ ಯು.ಎಸ್, ಗಣೇಶ ಅತ್ತಾವರ, ಯೋಜನಾ ನಿರ್ದೇಶಕ ಕಿರಣ್ ಯು, ಉಪಸ್ಥಿತರಿದ್ದರು.
ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ಸ್ವಾಗತಿಸಿದರು. ಯೋಜನೆಯ ಸಂಪರ್ಕನಾಧಿಕಾರಿ ಮಾತೇಶ್ ಭಂಡಾರಿ ವಂದಿಸಿದರು. ಗಿರೀಶ್ ಎಚ್.ಎಸ್ ಮತ್ತು ಪುನೀತ್ ರೈ ಸಹಕರಿಸಿದರು. ಒಡಿಯೂರು ಶ್ರೀಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳಿಗೆ ಯತಿಕಾರ್ಪ್ ಇಂಡಿಯಾ ಪ್ರೈ. ಲಿಮಿಟೆಡ್ ಇದರ ಸಿಬ್ಬಂದಿಗಳಿಂದ ಮೊಬೈಲ್ ವಾಟ್ಸಪ್ ಅಟೋಮೇಶನ್ ಸಾಪ್ಟ್‌ವೇರ್ ಬಗ್ಗೆ ತರಬೇತಿಯನ್ನು ನೀಡಲಾಯಿತು.
------------------
ಕೇಂದ್ರ ಸಹಕಾರ ಸಚಿವಾಲಯವು 5 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸ್ವ-ಸಹಾಯ ಗುಂಪುಗಳಿಗೆ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪಾರದರ್ಶಕ ಮತ್ತು ಅತ್ಯಂತ ವೇಗ ಗತಿಯ ಸೇವೆಗಳನ್ನು ಒದಗಿಸಲು ಕ್ರಮವಿಡಲಾಗಿದೆ.
-ಸಹಕಾರ ರತ್ನ ಎ.ಸುರೇಶ್ ರೈ, ಅಧ್ಯಕ್ಷರು
ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘ
--------------------