ಕೆಜಿಎಫ್: ಅಪರಾಧ ರಹಿತ ಉತ್ತಮ ಸಮಾಜ ನಿರ್ಮಿಸಲು ನಿವೃತ್ತ ಪೊಲೀಸರ ಸಹಕಾರ ಅಗತ್ಯವಾಗಿದ್ದು, ಅನುಭವಿ ಹಾಗೂ ಉತ್ತಮ ಸೇವೆಗೈದ ನಿವೃತ್ತ ಅಧಿಕಾರಿಗಳ, ಸಿಬ್ಬಂದಿ ಸಲಹೆ&ಸೂಚನೆಗಳಿಂದ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದರು.
ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾತನಾಡಿ, ಯಾವುದೇ ನಿವೃತ್ತ ಅಧಿಕಾರಿ, ಪೊಲೀಸರನ್ನು ಪ್ರಸ್ತುತ ಕರ್ತವ್ಯದಲ್ಲಿರುವ ಅಧಿಕಾರಿ, ಸಿಬ್ಬಂದಿ ಗೌರವಿಸಿ, ಸೂಕ್ತ ಸ್ಥಾನಮಾನ ದೊರಕಿಸಬೇಕು ಎಂದರು.
ಇಲ್ಲಿನ ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಯಾವುದೇ ಸಂದರ್ಭದಲ್ಲಿಯೂ ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದರು.
ನಿವೃತ್ತ ಎಆರ್ಎಸ್ಐ ಆರ್.ರಮೇಶ್ ಮಾತನಾಡಿ, ಸರ್ಕಾರವು ಈಗಾಗಲೇ ನಿವೃತ್ತರಿಗೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಪೊಲೀಸ್ ಕಲ್ಯಾಣ ನಿಧಿಯಿಂದ ನೀಡುವ ಸೌಕರ್ಯದೊಂದಿಗೆ, ಇತರೆ ಸೌಲಭ್ಯಗಳನ್ನು ಸಹ ಕಲ್ಪಿಸಲು ಕೆಜಿಎಫ್ನ ಪೊಲೀಸ್ ಅಧೀಕ್ಷಕರು ಇಲಾಖಾ ಮುಖ್ಯಸ್ಥರು, ಸರ್ಕಾರದೊಂದಿಗೆ ವ್ಯವಹರಿಸಿ ಮತ್ತಷ್ಟು ಸವಲತ್ತು ಕಲ್ಪಿಸಿಕೊಡಬೇಕು ಎಂದು ಕೋರಿದರು.
2024-&25ನೇ ಸಾಲಿನಲ್ಲಿ ನಿವೃತ್ತರಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಕೆಜಿಎಫ್ ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಸಿಪಿಐ ವೈ.ಆರ್.ರಂಗಶಾಮಯ್ಯ. ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಇದ್ದರು.
ಆರ್ಪಿಐ ವಿ.ಸೋಮಶೇಖರ್ ನೇತೃತ್ವದಲ್ಲಿ ಡಿಎಆರ್ ನಾಗರಿಕ ಮತ್ತು ಮಹಿಳಾ ಪೊಲೀಸ್ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಅತಿಥಿಗಳು ಪೊಲೀಸ್ ಧ್ವಜಗಳನ್ನು ಬಿಡುಗಡೆಗೊಳಿಸಿ ದೇಣಿಗೆ ನೀಡಿದರು.