ನ್ಯೂಸ್

ಪ್ರೊ.ಕೆ.ರಾಮದಾಸ್ ನೆನಪಿನಲ್ಲಿ ಸಂವಾದ 16ಕ್ಕೆ

ಮೈಸೂರು: ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ವಿಚಾರವಾದಿ, ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ ನೆನಪಿನಲ್ಲಿ ‘ಸಂವಾದ, ಪುಸ್ತಕ ಬಿಡುಗಡೆ ಹಾಗೂ ಲೇಖನ ಪ್ರಶಸ್ತಿ ಪ್ರದಾನ’ ಸಮಾರಂಭವನ್ನು ಜೂ.16ರಂದು ರಂಗಾಯಣದ ಆವರಣದಲ್ಲಿರುವ ಶ್ರೀರಂಗ ವೇದಿಕೆಯಲ್ಲಿ ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಹೇಳಿದರು.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಉದ್ಘಾಟಿಸುವರು. ತಾವು ಬರೆದಿರುವ ಅಂತರ್ಜಾತಿ ವಿವಾಹ ಮತ್ತು ಸಾಮಾಜಿಕ ಸಮಾನತೆ ಪುಸ್ತಕವನ್ನು ಸಾಹಿತಿ ಸವಿತಾ ನಾಗಭೂಷಣ್ ಬಿಡುಗಡೆ ಮಾಡುವರು. ರಾಜಕಾರಣದ ನೈತಿಕ ನೆಲೆಗಟ್ಟು ಮತ್ತು ಪ್ರಸ್ತುತ ರಾಜಕಾರಣ ಲೇಖನದಲ್ಲಿ ವಿಜೇತರಾದವರಿಗೆ ಹಿರಿಯ ಪ್ರತಕರ್ತ ರವೀಂದ್ರ ಭಟ್ ಪ್ರಶಸ್ತಿ ನೀಡುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜಕಾರಣದ ನೈತಿಕ ನೆಲೆಗಟ್ಟು ಮತ್ತು ಪ್ರಸ್ತುತ ರಾಜಕಾರಣ ಸಂವಾದದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು. ಚಿಂತಕ ಶಿವಸುಂದರ್ ರಾಜಕಾರಣದ ನೈತಿಕ ನೆಲೆಗಟ್ಟು ಹಾಗೂ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ರಾಜಕಾರಣ ಮತ್ತು ಪ್ರಗತಿಪರರು ವಿಷಯ ಕುರಿತು ವಿಚಾರ ಮಂಡನೆ ಮಾಡುವರು. ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಚಿಂತಕಿ ಡಾ.ಬಿ.ಎಸ್.ದಿನಮಣಿ ಭಾಗವಹಿಸುವರು ಎಂದರು.
ಸಂಜೆ 4ಕ್ಕೆ ಆಯೋಜಿಸಿರುವ ಸಮಾರೋಪ ಸಮಾರಂಭದಲ್ಲಿ ವನ್ಯಜೀವಿ ತಜ್ಞ ಕೃಪಾಕರ ಮತ್ತು ಸೇನಾನಿ ಮಾತನಾಡುವರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ವಿಚಾರವಾದಿ ಡಾ.ಎಚ್.ಆರ್.ಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ತಿಳಿಸಿದರು.
ಅಧ್ಯಾಪಕಿ ಡಾ.ಬಿ.ಎಸ್.ದಿನಮಣಿ ಇದ್ದರು.