ಇಸ್ಲಮಾಬಾದ್: ಸಹೋದರ ಮತ್ತು ಸಹೋದರಿ ನಡುವಿನ ಲೈಂಗಿಕತೆ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಪ್ರಶ್ನೆ ಪತ್ರಿಕೆಯಲ್ಲಿ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಪಾಕಿಸ್ತಾನದ ಯೂನಿವರ್ಸಿಟಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಅಶ್ಲೀಲ ವಿಷಯವನ್ನು ಪ್ರಶ್ನೆ ಪತ್ರಿಕೆಯಲ್ಲಿ ಸೇರಿಸಿದ ಇಸ್ಲಮಾಬಾದ್ ಮೂಲದ COMSATS ಯೂನಿವರ್ಸಿಟಿಯ ವಿರುದ್ಧ ಅನೇಕ ಸೆಲೆಬ್ರಿಟಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಟೀಕಾ ಪ್ರಹಾರ ನಡೆಸಿವೆ. ಸಲ್ಲದೆ, ಉಪಕುಲಪತಿ ಮತ್ತು ಕುಲಪತಿಗಳನ್ನು ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಟ್ವಿಟರ್, ಫೇಸ್ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಪ್ರಶ್ನೆ ಪತ್ರಿಕೆಯ ಸ್ಕ್ರೀನ್ಶಾಟ್ ಹರಿದಾಡುತ್ತಿದೆ. ಪ್ರಶ್ನೆ ಪತ್ರಿಕೆಯಲ್ಲಿ ಜೂಲಿ ಮತ್ತು ಮಾರ್ಕ್ ಸನ್ನಿವೇಶದ ಪ್ರಬಂಧ ನೀಡಲಾಗಿತ್ತು. ಇದರೊಂದಿಗೆ ಕೆಲವು ಪ್ರಶ್ನೆಗಳನ್ನು ನೀಡಿ ಉತ್ತರ ಬರೆಯುವಂತೆ ಹೇಳಲಾಗಿತ್ತು.
ನಿಮಗೆ ನಾಚಿಕೆ ಆಗಬೇಕು. ಅಸಹ್ಯ ಎನಿಸುವ ನಿಮ್ಮ ವಿಶ್ವವಿದ್ಯಾಲಯವನ್ನು ಕೂಡಲೇ ಮುಚ್ಚಿಸಬೇಕು ಮತ್ತು ವಿಕೃತ ಶಿಕ್ಷಕರನ್ನು ಒದ್ದು ಹೊರಗೆ ಹಾಕಬೇಕು. ಇಂತಹ ಪ್ರಶ್ನೆಗಳನ್ನು ಕೇಳಿದವರನ್ನು ಜೈಲಿಗೆ ಅಟ್ಟಬೇಕು. ಇಂತಹ ಕೊಳಕು ಪ್ರಶ್ನೆಗಳನ್ನು ಕೇಳಲು ನಿಮಗೆ ಎಷ್ಟು ಧೈರ್ಯ? ಎಂದು ಗಾಯಕಿ ಮಿಶಿ ಖಾನ್ ಅವರು ಟ್ವಿಟರ್ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಪಾಕಿಸ್ತಾನದ ಉನ್ನತ ವಿಶ್ವವಿದ್ಯಾಲಯಗಳು ಪಾಕಿಸ್ತಾನದ ಯುವಕರನ್ನು ಮತ್ತು ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ಮೌಲ್ಯಗಳನ್ನು ನಾಶಮಾಡುವ ಉದ್ದೇಶವನ್ನು ಹೊಂದಿವೆ ಎಂದು ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನೊಂದಿಗೆ ಸಂಬಂಧ ಹೊಂದಿರುವುದಾಗಿ ಟ್ವಿಟರ್ ಬಯೋ ಹೇಳುತ್ತಿರುವ ಶೆಹರ್ಯಾರ್ ಬುಖಾರಿ ಎಂಬುವರು ಬರೆದುಕೊಂಡಿದ್ದಾರೆ.
ಅಂದಹಾಗೆ ಈ ವಿವಾದಾತ್ಮಕ ಪ್ರಶ್ನೆಯನ್ನು ಬ್ಯಾಚುಲರ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ (ಬಿಇಇ) ವಿದ್ಯಾರ್ಥಿಗಳಿಗೆ ಕಳೆದ ಡಿಸೆಂಬರ್ನಲ್ಲಿ ಕೇಳಲಾಗಿದೆ. ಜೂಲಿ ಮತ್ತು ಮಾರ್ಕ್ ಇಬ್ಬರು ಸಹೋದರ-ಸಹೋದರಿಯರು. ಇಬ್ಬರು ಬೇಸಿಗೆಯ ರಜಾ ದಿನದಲ್ಲಿ ಕಾಲೇಜಿನಿಂದ ಫ್ರಾನ್ಸ್ಗೆ ಒಟ್ಟಿಗೆ ಪ್ರವಾಸ ಮಾಡುತ್ತಾರೆ. ಅವರು ಒಂದು ರಾತ್ರಿ ಸಮುದ್ರ ತೀರದ ಕ್ಯಾಬಿನ್ನಲ್ಲಿ ಉಳಿದುಕೊಳ್ಳುತ್ತಾರೆ. ಇಬ್ಬರು ಪ್ರೀತಿಸಲು ಪ್ರಯತ್ನಿಸಿದರೆ ಅದು ಆಸಕ್ತಿದಾಯಕ ಮತ್ತು ವಿನೋದಮಯವಾಗಿರುತ್ತದೆ ಎಂದು ನಿರ್ಧರಿಸುತ್ತಾರೆ. ಇದು ಇಬ್ಬರಿಗೂ ಹೊಸ ಅನುಭವವಾಗಿರುತ್ತದೆ. ಆದರೆ, ಜೂಲಿ ಜನನ ನಿಯಂತ್ರಣದಲ್ಲಿದ್ದಳು. ಹೀಗಾಗಿ ಮಾರ್ಕ್ ಕಾಂಡೋಮ್ ಅನ್ನು ಬಳಸಿದನು ಮತ್ತು ಇಬ್ಬರೂ ಒಟ್ಟಿಗೆ ಅನ್ಯೋನ್ಯವಾಗಿರುವುದನ್ನು ಆನಂದಿಸಿದರು. ಆದರೆ ಮತ್ತೆ ಅದನ್ನು ಎಂದಿಗೂ ಮಾಡಬಾರದು ಎಂದು ಪ್ರತಿಜ್ಞೆ ಸಹ ಮಾಡಿದರು ಎಂದು ಪ್ರಬಂಧ ನೀಡಲಾಗಿತ್ತು.
ಜೂಲಿ ಮತ್ತು ಮಾರ್ಕ್ ಕುರಿತಾದ ಇಡೀ ಸನ್ನಿವೇಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ವಿಧ್ಯಾರ್ಥಿಗಳಿಗೆ ಕೇಳಿ ಅನಿಸಿಕೆ ಬರೆಯಲು ತಿಳಿಸಲಾಗಿತ್ತು. ಪ್ರೀತಿ ಮಾಡುವುದು ಉತ್ತಮ ಎನಿಸಿದರೆ, ಅದಕ್ಕೆ ಉದಾಹರಣೆ ಸಹಿತ ಕಾರಣಗಳನ್ನು ನೀಡಲು ಕೇಳಲಾಗಿತ್ತು.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಪ್ರಶ್ನೆಯನ್ನು ನೀಡಿದ ಶಿಕ್ಷಕರನ್ನು ಪ್ರೊಫೆಸರ್ ಖೈರ್ ಉಲ್ ಬಶರ್ ಎಂದು ಗುರುತಿಸಲಾಗಿದೆ. ತನಿಖೆಯ ನಂತರ ವಿಶ್ವವಿದ್ಯಾನಿಲಯದಿಂದ ಅವರನ್ನು ವಜಾಗೊಳಿಸಲಾಗಿದ್ದು, ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಪ್ರಶ್ನೆಯ ವಿಷಯವು ಹೆಚ್ಚು ಆಕ್ಷೇಪಾರ್ಹವಾಗಿದೆ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಪಠ್ಯಕ್ರಮದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಮತ್ತು ವಿದ್ಯಾರ್ಥಿಗಳ ಕುಟುಂಬಗಳಲ್ಲಿ ಅಶಾಂತಿಯನ್ನು ಉಂಟುಮಾಡಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)