ಅತಿಯಾದ ಮಹತ್ವಾಕಾಂಕ್ಷೆ, ಬೇರೆ ರಾಷ್ಟ್ರಗಳ ಗಡಿಪ್ರದೇಶದಲ್ಲಿ ಪಾರಮ್ಯ ಸಾಧಿಸಬೇಕೆಂಬ ಹುಚ್ಚು ಹಠ ಚೀನಾದ ಪಾಲಿಗೆ ಮುಳುವಾಗುತ್ತಿದೆ. ಜತೆಗೆ, ಆಂತರಿಕ ತಲ್ಲಣಗಳೂ ಆ ರಾಷ್ಟ್ರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಜಾಗತಿಕವಾಗಿ ಅದರ ಮೌಲ್ಯ ಕುಸಿದಿದೆ. ಚೀನಾದ ಸರ್ಕಾರದಿಂದ ಹಿಡಿದು ಕಂಪನಿಗಳವರೆಗೆ ಯಾವುದನ್ನೂ ಜನ ನಂಬುತ್ತಿಲ್ಲ. ಭಾರತ ಇತ್ತೀಚೆಗಷ್ಟೇ ಆ ದೇಶದ 59 ಆಪ್ಗಳನ್ನು ನಿಷೇಧಿಸುವ ಮೂಲಕ ಮಹತ್ವದ ಹೆಜ್ಜೆ ಇರಿಸಿತು. ರಫ್ತಿನ ಮೇಲೆಯೇ ರಾಷ್ಟ್ರವನ್ನು ಕಟ್ಟಿರುವ ಚೀನಾ ಹಲವು ಆಘಾತಗಳನ್ನು ಎದುರಿಸುತ್ತಿದ್ದರೂ, ಪಾಠ ಕಲಿಯುತ್ತಿಲ್ಲ. ಅಲ್ಲಿನ ಕಾರ್ಖಾನೆಗಳು ಮುಚ್ಚಿ ಕೆಲಸ ಕಳೆದುಕೊಂಡ ಜನ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಅನೇಕ ಕಂಪನಿಗಳು ಚೀನಾದ ಸಹವಾಸವೇ ಬೇಡವೆಂದು ಭಾರತ ಸೇರಿ ಬೇರೆ-ಬೇರೆ ರಾಷ್ಟ್ರಗಳತ್ತ ಮುಖಮಾಡಿವೆ. ಒಟ್ಟಾರೆ ಚೀನಾದಲ್ಲಿ ಸಂಕಷ್ಟಗಳ ಕಾಮೋಡ. ಹೀಗಿರುವಾಗಲೂ ಲಡಾಖ್ ಗಡಿಯಲ್ಲಿ ವಿನಾಕಾರಣ ಘರ್ಷಣೆ ಸೃಷ್ಟಿಸಿ, ಹಲವು ಬೆಳವಣಿಗೆಗಳ ನಂತರ ವಿವಾದಿತ ಪ್ರದೇಶದಿಂದ ತನ್ನ ಸೇನೆಯನ್ನು ವಾಪಸ್ ಪಡೆಯಿತು.
ಚೀನಾದ ಕುತಂತ್ರಗಳನ್ನು ಭಾರತ ಈಗ ಗಂಭೀರವಾಗಿ ಪರಿಗಣಿಸಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಐಎಟಿ) ಚೀನಾದ ಸರಕುಗಳನ್ನು ಬಹಿಷ್ಕರಿಸಲು ಮುಂದಾಗಿರುವುದು ಗೊತ್ತಿರುವಂಥದ್ದೇ. ಭಾರತ ಈಗಾಗಲೇ ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ 450 ವಸ್ತುಗಳನ್ನು ಅದು ಪಟ್ಟಿ ಮಾಡಿದೆ. ಪ್ರಸಕ್ತ ಭಾರತ ಚೀನಾದಿಂದ ವಾರ್ಷಿಕವಾಗಿ -ಠಿ; 5.25 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಮೊದಲ ಹಂತವಾಗಿ 2021 ಡಿಸೆಂಬರ್ ಅಂತ್ಯದ ವೇಳೆಗೆ ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ಕಡಿಮೆ ಮಾಡುವ ಗುರಿ ಹೊಂದಿದೆ ಎಂಬುದು ಗಮನಾರ್ಹ. ಈ ಕ್ರಮಗಳ ಬಳಿಕ ವಿದ್ಯುತ್ ಗುತ್ತಿಗೆಯಿಂದ ಚೀನಾ ಕಂಪನಿಗಳನ್ನು ಹೊರಗಿಡಲು ಕೇಂದ್ರ ಸರ್ಕಾರ ಮುಂದಾಗಿದೆ. ಚೀನೀ ಕಂಪನಿಗಳು ವಿದ್ಯುತ್ ಕ್ಷೇತ್ರದಲ್ಲಿ ನಿಧಾನವಾಗಿ ಒಳ ನುಗ್ಗುತ್ತಿವೆ ಎಂಬುದನ್ನು ಕೈಗಾರಿಕಾ ವಲಯದ ಅಂಕಿಅಂಶಗಳು ಸ್ಪಷ್ಟಪಡಿಸಿವೆ. 2016ರಿಂದ 2020 ಮಾರ್ಚ್ವರೆಗೆ ರಾಷ್ಟ್ರೀಯ ವಿದ್ಯುತ್ ಜಾಲದ (ಗ್ರಿಡ್) ಕೆಲ ಭಾಗಗಳು ಮತ್ತು 46 ನಗರಗಳ ಗ್ರಿಡ್ಗಳ ನಿಯಂತ್ರಣ ಸ್ಥಾಪಿಸುವ ಗುತ್ತಿಗೆಗಳನ್ನು ಚೀನಿ ಕಂಪನಿಗಳು ಪಡೆದುಕೊಂಡಿವೆ. ಮುಂಬರುವ ದಿನಗಳಲ್ಲಿ ಈ ಚೀನೀ ಕಂಪನಿಗಳನ್ನು ಹೊರಕ್ಕೆ ಕಳುಹಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಚೀನಾವನ್ನು ಹೀಗೆ ಬಹುತಂತ್ರ ಮತ್ತು ವಿವಿಧ ಆಯಾಮಗಳಲ್ಲಿ ಕಟ್ಟಿ ಹಾಕುವುದು ಅಗತ್ಯವೇ ಆಗಿದೆ. ಆರ್ಥಿಕ ಬಲದ ಮೇಲೆ ಅಹಂಕಾರ ತೋರಿ, ಧಾಷ್ಟರ್್ಯ ಮೆರೆಯುತ್ತಿರುವ ಚೀನಾಕ್ಕೆ ವಿತ್ತೀಯ ರಂಗದಲ್ಲೇ ತಿರುಗೇಟು ನೀಡುವುದು ಸರಿಯಾದ ಕ್ರಮ. ಭಾರತ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರಗಳನ್ನು ತಳೆಯುತ್ತಿದೆ. ಒಂದೊಂದೇ ಕ್ಷೇತ್ರಗಳಿಂದ ಚೀನಾದ ನಿಯಂತ್ರಣ ಅಥವಾ ಪ್ರಾಬಲ್ಯವನ್ನು ಕೊನೆಗಾಣಿಸಲು ಸೂಕ್ತ ಮಾಗೋಪಾಯಗಳನ್ನು ಅನುಸರಿಸುತ್ತಿದೆ. ‘ಆತ್ಮನಿರ್ಭರ’ದ ಆಶಯ ಈಡೇರಲು ಇದು ಪೂರಕವಾಗಿ ಪರಿಣಮಿಸಲಿದೆ.