ಕೋಲಾರ ಜಿಲ್ಲೆಯಲ್ಲಿ ಅನಧಿಕೃತ ಶಾಲೆ, ಡೊನೇಷನ್​ ವಸೂಲಿ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಡಿಡಿಪಿಐ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್​, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಇದ್ದರು. 
ನ್ಯೂಸ್

ಡೊನೇಷನ್​ ಹಾವಳಿ ನಿಯಂತ್ರಿಸಿ

ಕೋಲಾರ: ಮಕ್ಕಳ ದಾಖಲಾತಿ ಮಾಡಿಸಿಕೊಳ್ಳುತ್ತಿರುವ ಅನಧಿಕೃತ ಹಾಗೂ ಪಾಲಕರಿಂದ ಹೆಚ್ಚುವರಿ ಡೊನೇಷನ್​ ಸುಲಿಗೆ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಿ ಶಾಲೆಗಳು ಸೌಲಭ್ಯಗಳಿಲ್ಲದೆ ಸೊರಗುತ್ತಿವೆ. ಇದರಿಂದಾಗಿ ಮಕ್ಕಳ ದಾಖಲಾತಿಯು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದಕ್ಕೆ ಅಧಿಕಾರಿಗಳೆ ನೇರ ಹೊಣೆಯಾಗಿದ್ದಾರೆ ಎಂದು ಒತ್ತಾಯಿಸಿದರು.

ರಾಜಕೀಯ ಮುಂಡರ ಮಾಲೀಕತ್ವದಲ್ಲಿ ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಶಾಲೆಗಳು ಉದ್ಧಾರವಾಗಲು ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿನ ಪ್ರತಿ ಮಗುವಿಗೂ ಕಡ್ಡಾಯವಾಗಿ ಶಿಕ್ಷಣ ಕಲ್ಪಿಸಬೇಕು ಎಂದು ಸರ್ಕಾರಗಳು ಹೆಸರಿಗಷ್ಟೇ ಯೋಜನೆಗಳನ್ನು ಜಾರಿ ಮಾಡಿವೆ. ಆದರೆ ಅವು ಕಾರ್ಯರೂಪಕ್ಕೆ ಬರುತ್ತಿಲ್ಲ. ಸರ್ಕಾರಿ ಅಧಿಕಾರಿಗಳೇ ಪರೋಕ್ಷವಾಗಿ ಖಾಸಗಿಯವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರಿ ಶಾಲೆಗಲ್ಲಿ ಶೇ.40 ಹುದ್ದೆಗಳು ಖಾಲಿ ಇವೆ. ಶಿಕ್ಷಕರ ನೇಮಕಾತಿ ಶಾಲೆ ಪ್ರಾರಂಭದ ಸಮಯದಲ್ಲಿ ಸರ್ಕಾರದಿಂದ ಮಕ್ಕಳಿಗೆ ವಿತರಣೆೆಯಾಗದ ಪಠ್ಯಪುಸ್ತಕ, ಸಮವಸ್ತ್ರ ಮತ್ತಿತರ ಸಮಸ್ಯೆಗಳನ್ನೇ ಬಂಡವಾಳವಾಗಿಸಿಕೊಂಡು ಖಾಸಗಿ ಶಾಲೆಯ ಮುಖ್ಯಸ್ಥರು ಬಡ ಕೂಲಿ ಕಾರ್ಮಿಕರ ಮಕ್ಕಳ ಭವಿಷ್ಯವನ್ನು ರೂಪಿಸುತ್ತೇವೆಂದು ಪಾಲಕರ ತಲೆಕೆಡಿಸಿ ದಾಖಲು ಮಾಡಿಕೊಂಡು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಪದಾಧಿಕಾರಿಗಳಾದ ಮರಗಲ್​ ಶ್ರೀನಿವಾಸ್​, ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ನಾರಾಯಣಗೌಡ, ಸುಪ್ರೀಂ ಚಲ, ಶಿವಾರೆಡ್ಡಿ, ತೆರ್ನಹಳ್ಳಿ ಆಂಜಿನಪ್ಪ, ನಾಗರಾಜ್​, ಯಲ್ಲಣ್ಣ, ಹರೀಶ್​, ಚಂದ್ರಪ್ಪ, ಶೈಲಜಾ, ವಿಜಯಪಾಲ್​, ರತ್ನಮ್ಮ, ಗೌರಮ್ಮ, ವೆಂಕಟಮ್ಮ ಹೆಬ್ಬಣಿ ಆನಂದರೆಡ್ಡಿ ಇದ್ದರು.