ಬೆಂಗಳೂರು: ಕರೊನಾ ಸೋಂಕಿನಿಂದ ಹೆಚ್ಚುತ್ತಿರುವ ಮರಣ ಪ್ರಮಾಣ ನಿಯಂತ್ರಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸಿದ ಅವರು, ಬೀದರ್, ಧಾರವಾಡ, ಗದಗ, ಮೈಸೂರು ಜಿಲ್ಲೆಗಳಲ್ಲಿ ಸೋಂಕಿತರ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು.
ದೇಶದಲ್ಲಿ ಅತ್ಯಧಿಕ ಸಾವು ಸಂಭವಿಸುತ್ತಿರುವ 5 ಜಿಲ್ಲೆಗಳ ಪೈಕಿ ಬೀದರ್ ಜಿಲ್ಲೆ ಕೂಡ ಒಂದಾಗಿದ್ದು, ಮರಣ ಪ್ರಮಾಣಕ್ಕೆ ಕಡಿವಾಣ ಹಾಕಲೇಬೇಕು ಎಂದು ಸೂಚಿಸಿದರು. ಈ ವರೆಗೆ ಸಂಭವಿಸಿದ ಸಾವಿನ ಕುರಿತು ತಜ್ಞರ ವಿಶ್ಲೇಷಣಾ ವರದಿ ಕೂಡಲೇ ಕಳುಹಿಸಬೇಕು. ಬೆಂಗಳೂರು ನಗರ, ದಕ್ಷಿಣ ಕನ್ನಡ, ಧಾರವಾಡ, ಬಳ್ಳಾರಿ, ಉಡುಪಿ , ಕಲಬುರಗಿಯಲ್ಲಿ ಹೆಚ್ಚು ಪ್ರಕರಣ ದಾಖಲಾಗಿದ್ದು, ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖರಾಗುವಂತೆ ಸಿಎಂ ಸೂಚಿಸಿದರು.
ರ್ಯಾಪಿಡ್ ಆಂಟಿಜೆನ್ ಟೆಸ್ಟ್ಗೆ ಆದ್ಯತೆ ನೀಡಿದ್ದು, 1 ಲಕ್ಷ ಟೆಸ್ಟ್ ಕಿಟ್ ಖರೀದಿಸಿ ಜಿಲ್ಲೆಗಳಿಗೆ ವಿತರಿಸಲಾಗಿದೆ. ತುರ್ತು ಪ್ರಕರಣಗಳಲ್ಲಿ ವಿವೇಚನೆಯಿಂದ ಈ ಪರೀಕ್ಷೆ ನಡೆಸಿ. ಕಂಟೇನ್ವೆುಂಟ್ ವಲಯಗಳಲ್ಲಿ ಕಟ್ಟುನಿಟ್ಟಾಗಿ ಕ್ರಮ ವಹಿಸಬೇಕು. ಕ್ಷೇತ್ರಮಟ್ಟದ ಆರೋಗ್ಯ ಸಿಬ್ಬಂದಿ ಕೊರತೆ ಇರುವಲ್ಲಿ ಗುತ್ತಿಗೆ ಆಧಾರದಲ್ಲಿ 6 ತಿಂಗಳ ಅವಧಿಗೆ ನೇಮಿಸಿಕೊಳ್ಳಬೇಕು. ಹೊರಗಿನಿಂದ ವಲಸೆ ಬಂದವರ ಕ್ವಾರಂಟೈನ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕರೊನೇತರ ರೋಗಿಗಳ ಚಿಕಿತ್ಸೆಗೆ ಅಡ್ಡಿಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಕೋವಿಡ್ ಆಸ್ಪತ್ರೆಯಲ್ಲಿ ಸ್ವಚ್ಛತೆ ನಿರ್ವಹಿಸುವ ಡಿ-ಗ್ರೂಪ್ ನೌಕರರ ಪೋ›ತ್ಸಾಹಧನ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು ಎಂದ ಸಿಎಂ, ಕರೊನಾ ಮಾರಣಾಂತಿಕ ಕಾಯಿಲೆ ಅಲ್ಲ, ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಜನರಿಗೆ ತಿಳುವಳಿಕೆ ನೀಡುವಂತೆ ಸೂಚನೆ ನೀಡಿದರು. ಆಂಬುಲೆನ್ಸ್ ಮತ್ತು ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಆಗದಂತೆ ಎಚ್ಚರ ವಹಿಸಬೇಕು. ಡಿಜಿಟಲ್ ಎಕ್ಸ್ -ರೇ ಯಂತ್ರಗಳ ಮೂಲಕ ಶ್ವಾಸಕೋಶದ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಾಧ್ಯವಿದ್ದು, ಈ ಉಪಕರಣಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಸಚಿವರಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ, ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮುಂತಾದವರು ಉಪಸ್ಥಿತರಿದ್ದರು.
ಖಾಸಗಿಗೆ ಕೊನೆಯ ಎಚ್ಚರಿಕೆ: ಬೆಂಗಳೂರಿನಲ್ಲಿ ಕರೊನಾ ಸೋಂಕಿತರಿಗೆ ಮತ್ತು ಕರೊನೇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಕರಿಸದ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತಗಳ ಜತೆಗಿನ ಸಂವಾದ ವೇಳೆ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಅಸಹಕಾರದ ಬಗ್ಗೆ ಪ್ರಸ್ತಾಪವಾಯಿತು. ತುಮಕೂರು ಜಿಲ್ಲೆಯಲ್ಲಿ 2 ಮೆಡಿಕಲ್ ಕಾಲೇಜಿದ್ದರೂ ಈ ವರೆಗೆ ಸಹಕಾರ ಸಿಕ್ಕಿಲ್ಲ ಎಂಬುದು ಗಂಭೀರ ಚರ್ಚೆಗೆ ಕಾರಣವಾಯಿತು. ಇಂಥ ಸಂದರ್ಭದಲ್ಲೂ ಸಹಕರಿಸದ ಸಂಸ್ಥೆಯ ಲೈಸೆನ್ಸ್ ಏಕೆ ರದ್ದು ಮಾಡಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಉತ್ಸವಗಳಿಗೆ ಅವಕಾಶವಿಲ್ಲ: ಯಾವುದೇ ಕಾರಣಕ್ಕೂ ಸಾರ್ವಜನಿಕ ಉತ್ಸವ ಗಳನ್ನು ಆಚರಿಸುವಂತಿಲ್ಲ. ಜನರು ಧಾರ್ವಿುಕ ಸ್ಥಳ, ಮಾರುಕಟ್ಟೆ ಮುಂತಾದೆಡೆ ಗುಂಪುಗೂಡದಂತೆ ಎಚ್ಚರ ವಹಿಸಬೇಕು. ಬೂತ್ವುಟ್ಟದಲ್ಲಿ ಕ್ವಾರಂಟೈನ್, ಸಂರ್ಪತರ ಪತ್ತೆ, ಮನೆ ಮನೆ ಸಮೀಕ್ಷೆ ಪ್ರಕ್ರಿಯೆ ಪರಿಶೀಲನೆ ನಡೆಸಲು ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ, ಜನಪ್ರತಿನಿಧಿಗಳು ಹಾಗೂ ಸ್ವಯಂಸೇವಕರ ಸಹಕಾರ ಪಡೆಯುವಂತೆ ತಿಳಿಸಿದರು. 60 ವರ್ಷ ಮೇಲ್ಪಟ್ಟವರು ಹಾಗೂ ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವವರನ್ನು ಪ್ರತ್ಯೇಕವಾಗಿ ಇರಿಸಬೇಕು. ಐಎಲ್ಐ ಮತ್ತು ಉಸಿರಾಟದ ತೊಂದರೆ ಇರುವವರನ್ನು ಗುರುತಿಸಿ, ಕಡ್ಡಾಯವಾಗಿ ಕರೊನಾ ಪರೀಕ್ಷೆಗೊಳಪಡಿಸಬೇಕು. ಸೀಲ್ಡೌನ್ ಪರಿಣಾಮಕಾರಿಯಾಗಿ ಮಾಡಬೇಕು. ಈ ಪ್ರದೇಶಗಳಲ್ಲಿ ಹೆಚ್ಚು ಪರೀಕ್ಷೆ ನಡೆಸಬೇಕು ಎಂದರು.
ಅಧಿಕಾರಿಗಳಿಗೆ ಎಚ್ಚರಿಕೆ: ಇದು ಕೊನೆಯ ಬಾರಿ ಲಾಕ್ಡೌನ್, ಕರೊನಾ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿರಿ, ಮುಂದಿನ ಸಭೆ ವೇಳೆಗೆ ಸಮಸ್ಯೆ ಬಗೆಹರಿಸಿರಿ. ಇಲ್ಲವಾದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವೆ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಭಾನುವಾರದ ಸಭೆಯಲ್ಲಿ ಗರಂ ಆಗಿದ್ದ ಸಿಎಂ, ಸೋಮವಾರ ಟಾಸ್ಕ್ಫೋರ್ಸ್ ಸಭೆಯಲ್ಲಿ ಮತ್ತೆ ಸಿಟ್ಟಿಗೆದ್ದಿದ್ದರು. ಬೆಂಗಳೂರಿನ ಬಿಐಇಸಿಯಲ್ಲಿ ತೆರೆದ ಬೃಹತ್ ಕರೊನಾ ಆರೈಕೆ ಕೇಂದ್ರಕ್ಕೆ ಹಾಸಿಗೆಗಳನ್ನು ಬಾಡಿಗೆ ತಂದಿದ್ದೇ ಬಿಎಸ್ವೈ ಕೋಪತಾಪಕ್ಕೆ ಮೊದಲ ಕಾರಣವಾಯಿತು. ಹಾಸಿಗೆಗಳನ್ನು ಬಾಡಿಗೆ ತಂದದ್ದೇಕೆ? 2 ತಿಂಗಳಲ್ಲಿ ಅದರ ಬಾಡಿಗೆ ಮೊತ್ತವೆಷ್ಟು? ನನ್ನ ಗಮನಕ್ಕೆ ತರದೆ ಇಷ್ಟು ದೊಡ್ಡ ನಿರ್ಧಾರ ಹೇಗೆ ತೆಗೆದುಕೊಂಡಿರಿ? ನೀವು (ಅಧಿಕಾರಿಗಳು) ಮಾಡುವ ತಪ್ಪಿಗೆ ಸರ್ಕಾರ ಪ್ರತಿಪಕ್ಷಗಳಿಂದ ಆರೋಪ ಹೊರಿಸಿಕೊಳ್ಳಬೇಕಾಗಿ ಬಂದಿದೆ ಎಂದು ಏರಿದ ಧ್ವನಿಯಲ್ಲಿ ಫುಲ್ ಕ್ಲಾಸ್ ತೆಗೆದುಕೊಂಡರು ಎಂದು ಉನ್ನತ ಮೂಲಗಳು ತಿಳಿಸಿವೆ. ಬಾಡಿಗೆ ನಿರ್ಧಾರ ಕೈಬಿಟ್ಟು ಆರೈಕೆ ಕೇಂದ್ರಕ್ಕೆ ಅಗತ್ಯವಿರುವಷ್ಟು ಹಾಸಿಗೆಗಳನ್ನು ಖರೀದಿಸಿ, ನಂತರ ಬೇರೆಯದಕ್ಕೆ ಬಳಸಿಕೊಳ್ಳಲು ಸಾಧ್ಯವಿದೆ. ಸಂಕಷ್ಟ ಕಾಲದಲ್ಲಿ ಮನಸ್ಸಿಟ್ಟು, ಎಲ್ಲವನ್ನೂ ಲೆಕ್ಕಾಚಾರ ಹಾಕಿ ಪಾರದರ್ಶಕತೆ ಯಿಂದ ಕೆಲಸ ಮಾಡಿ ಎಂದು ಸಿಎಂ ತಾಕೀತು ಮಾಡಿದರು. ಹೆಚ್ಚುತ್ತಿರುವ ಸೋಂಕು ನಿಯಂತ್ರಣಕ್ಕಾಗಿ 1 ವಾರದ ಲಾಕ್ಡೌನ್ ವಿಧಿಸಲಾಗಿದೆ. ಲಭ್ಯ ಕಾಲಾವಕಾಶದಲ್ಲಿ ಎಲ್ಲ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸಭೆ ಸಮಿತಿ ಸಭೆಗಳು ಸ್ಥಗಿತ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮತ್ತೊಂದು ಸುತ್ತಿನ ಲಾಕ್ಡೌನ್ ಜಾರಿಗೆ ರಾಜ್ಯ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಮಂಡಲ ಹಾಗೂ ವಿಧಾನಸಭೆಯ ಎಲ್ಲ ಸಮಿತಿ ಸಭೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ಲಾಕ್ಡೌನ್ ವಿಧಿಸಿರುವಾಗ ಸಮಿತಿ ಸಭೆಗಳನ್ನು ನಡೆಸುವುದು ಸೂಕ್ತವಲ್ಲ. ಮುಂದಿನ ಆದೇಶದವರೆಗೂ ಸಮಿತಿ ಸಭೆಗಳನ್ನು ಸ್ಥಗಿತಗೊಳಿಸಬೇಕು ಎಂದು ವಿಧಾನಸಭಾಧ್ಯಕ್ಷರು ಆದೇಶಿಸಿರುವುದಾಗಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಸೋಮವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.