ನ್ಯೂಸ್

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದ ಸಹಕಾರ; ಡಾ.ರಾಜ್‌ಕುಮಾರ್ ಅಕಾಡೆಮಿ ಜತೆ ಒಡಂಬಡಿಕೆ

ಬೆಂಗಳೂರು: ಯುಪಿಎಸ್‌ಸಿ,ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಸಲುವಾಗಿ ಡಾ. ರಾಜ್‌ ಕುಮಾರ್ ಅಕಾಡೆಮಿಯ ಲರ್ನಿಂಗ್ ಆಪ್ ಮತ್ತು ರಾಜ್ಯ ಎನ್. ಎಸ್. ಎಸ್ ಕೋಶ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಈ ಒಡಂಬಡಿಕೆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ವಿಶ್ವವಿದ್ಯಾಲಯ / ನಿರ್ದೇಶನಾಲಯಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.

ವಿಕಾಸಸೌಧದಲ್ಲಿ ನಡೆದ ಒಡಂಬಡಿಕೆ ಬಳಿಕ ಮಾತನಾಡಿದ ಕ್ರೀಡಾ ಸಚಿವ ಬಿ.ನಾಗೇಂದ್ರ, ಡಾ. ರಾಜ್ ಕುಮಾರ್ ಅವರ ಇಡೀ ಕುಟುಂಬ ಸಮಾಜ ಸೇವೆ ಜತೆ ಜತೆಗೆ ಶಿಕ್ಷಣದ ಮೌಲ್ಯಗಳನ್ನು ಹೆಚ್ಚಿಸಲು ರಾಜ್ ಕುಮಾರ್ ಅಕಾಡೆಮಿ ಹುಟ್ಟುಹಾಕಿದೆ. ಇಂತಹ ಸಂಸ್ಥೆಯೊಂದಿಗೆ ಇವತ್ತು ನಾವು ಒಡಂಬಡಿಕೆ ಮಾಡಿಕೊಂಡಿದ್ದು ಬಹಳ ಸಂತಸ ತಂದಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯೂ ರಾಜ್ಯದ 65 ವಿಶ್ವವಿದ್ಯಾಲಯ ಹಾಗೂ 4 ನಿರ್ದೇಶನಾಲಯಗಳ ಸುಮಾರು 6.40ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕ/ಸೇವಕಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಲರ್ನಿಂಗ್ ಆಪ್‌ನಿಂದ ಅನುಕೂಲವಾಗಲಿದೆ. ಆನ್‌ಲೈನ್ ಮೂಲಕ ತಮಗೆ ಬೇಕಾದ ಮಾಹಿತಿ ಪಡೆಯುವ ಸಾಧನ ಇದಾಗಿದೆ. ಸರ್ಕಾರ ಸದಾ ಡಾ. ರಾಜ್ ಕುಮಾರ್ ಅಕಾಡೆಮಿ ಮತ್ತು ಕುಟುಂಬ ವರ್ಗದ ಜೊತೆಗೆ ಇರುತ್ತೆ ಎಂದರು.

ಡಾ.ರಾಜ್ ಕುಮಾರ್ ಅಕಾಡೆಮಿ ಮುಖ್ಯಸ್ಥ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ಈಗಾಗಲೇ ನಮ್ಮ ಕುಟುಂಬ ರಾಜ್ಯದ ಎಳುಕೋಟಿ ಜನರ ವಿಶ್ವಾಸ ಗಳಿಸಿದೆ. ಸಮಾಜ ಸೇವೆ ಉದ್ದೇಶದಿಂದ ಡಾ.ರಾಜ್ ಕುಮಾರ್ ಅಕಾಡೆಮಿಯ ಮೂಲಕ ಬಡ ಮಕ್ಕಳ ವಿದ್ಯಾವಿಕಾಸಕ್ಕೆ ಸಹಕಾರ ನೀಡುತ್ತ ಬಂದಿದೆ ಎಂದು ಹೇಳಿದರು.

ಗುರು ರಾಜ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಮಂಜುನಾಥ್ ಪ್ರಸಾದ್, ಕಾರ್ತಿಗೇಯನ್, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್, ರಾಜ್ಯ ಎನ್. ಎಸ್. ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ, ರೂಪಾಲಿ, 31 ಜಿಲ್ಲೆಗಳ ವಿಶ್ವವಿದ್ಯಾಲಯದ ಕುಲಪತಿಗಳು ಉಪಸ್ಥಿತರಿದ್ದರು.