ಕೆ.ಪಿ.ಅಂಶುಮಂತ್ 
ನ್ಯೂಸ್

ಚಿಕ್ಕಮಗಳೂರು ಕ್ಷೇತ್ರಕ್ಕೆ ಸಂಸದೆ ಕೊಡುಗೆ ಶೂನ್ಯ

ಎನ್.ಆರ್.ಪುರ: ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರ ಕೊಡುಗೆ ಏನು ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಪ್ರಶ್ನಿಸಿದರು.

ಶೋಭಾ ಕರಂದ್ಲಾಜೆ ಎರಡು ಬಾರಿ ಸಂಸದರಾಗಿದ್ದಾರೆ. ಎರಡೂ ಜಿಲ್ಲೆಯ ಜನರು ಅವರ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವರು ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. ಮಳೆ ಅಭಾವದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮೂಲಕ ನೆರವು ನೀಡಬೇಕಿತ್ತು. ಆ ಕೆಲಸವನ್ನೂ ಮಾಡಿಲ್ಲ. ಕೇಂದ್ರ ಕೃಷಿ ಇಲಾಖೆ ಜವಾಬ್ದಾರಿ ಮರೆತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಪೂರ್ಣಗೊಳ್ಳುತ್ತಿದೆ. ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸಿದೆ. ಶಾಸಕ ಟಿ.ಡಿ.ರಾಜೇಗೌಡ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಕೃಷಿ ಹಾಗೂ ತೋಟಗಾರಿಕೆ ಸಚಿವರನ್ನು ಭೇಟಿ ಮಾಡಿ ರೈತರ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದರು.
ಕೇಂದ್ರ ಸರ್ಕಾರ ಕಾಫಿ, ಅಡಕೆ, ಚಹಾ, ಕಾಳುಮೆಣಸು, ಏಲಕ್ಕಿ ಬೆಳೆಯನ್ನು ಆಹಾರ ಬೆಳೆಯಿಂದ ಹೊರಗಿಟ್ಟು ಪ್ಲಾಂಟೇಷನ್ ಬೆಳೆ ಎಂದು ಕಾನೂನು ಮಾಡಿರುವ ಸರ್ಫೇಸಿ ಕಾಯ್ದೆ ಜಾರಿಗೆ ತಂದಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ದೂರಿದರು.
ಕಸ್ತೂರಿ ರಂಗನ್ ವರದಿ ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ. 2022ರ ಆಗಸ್ಟ್‌ನಲ್ಲಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ದಿದ್ದರು. ಆದರೂ ಸಮಸ್ಯೆ ಪರಿಹಾರವಾಗಿಲ್ಲ. ಈಗ ರಾಜ್ಯ ಸರ್ಕಾರ ಉಪ ಸಮಿತಿ ರಚಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಶೆಟ್ಟಿ, ಇ.ಸಿ.ಜೋಯಿ, ಸಾಜು, ಕೆ.ಎ.ಅಬೂಬಕರ್, ಸುನೀಲ್, ಬಿಳಾಲುಮನೆ ಉಪೇಂದ್ರ, ಜುಬೇದಾ, ಬಿ.ಎಸ್.ಸುಬ್ರಹ್ಮಣ್ಯ, ನಾಗರಾಜ್, ರಜಿ, ಸಂಕೇತ, ಪೌಲೋಸ್ ಇದ್ದರು.