ಸಾಗರದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಮಾಲತೇಶ್, ಪರಶುರಾಮಪ್ಪ, ಜಿ.ಪರಮೇಶ್ವರಪ್ಪ, ಗಣಪತಿ ಇತರರಿದ್ದರು. 
ನ್ಯೂಸ್

ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕರಿಸಿ

ಸೋಮಶೇಖರ ಎನ್

ಸಾಗರ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು. ಶಾಲೆ ಅಭಿವೃದ್ಧಿಗೆ ಸಾರ್ವಜನಿಕರು ಹಾಗೂ ಖಾಸಗಿ ಕಂಪನಿಗಳು ಸಹಕಾರ ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರದ ನೆಹರು ಮೈದಾನದಲ್ಲಿ ಶಿಕ್ಷಣ ಇಲಾಖೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ 14 ವರ್ಷದೊಳಗಿನ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಅಜೀಂ ಪ್ರೇಮ್‌ಜೀ ಅವರ ಸಂಸ್ಥೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮೊಟ್ಟೆ ಪೂರೈಕೆ ಮಾಡಲು 1,500 ಕೋಟಿ ರೂ. ನೀಡಿದೆ ಎಂದು ತಿಳಿಸಿದರು.

ದೇಶದ ಸಮಗ್ರ ಅಭಿವದ್ಧಿಯಲ್ಲಿ ದೊಡ್ಡ ಕಂಪನಿಗಳ ಪಾತ್ರವಿದ್ದು, ಕಂಪನಿಗಳ ಏಳಿಗೆಗೆ ದೇಶವಾಸಿಗಳ ಕೊಡುಗೆ ಇರುತ್ತದೆ. ನೆಲ-ಜಲ ಸಂಪನ್ಮೂಲ ಬಳಕೆ ಮಾಡಿಕೊಳ್ಳುವ ಕಂಪನಿಗಳು ಗಳಿಕೆಯ ಹಣದಲ್ಲಿ ಒಂದು ಭಾಗವನ್ನು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನೀಡಬೇಕು ಎಂದರು.

ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ನಡುವೆಯೂ ಮಕ್ಕಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮಕ್ಕಳಿಗೆ ಓದಿನ ಜತೆಗೆ ಕ್ರೀಡಾ ಚಟುವಟಿಕೆಗೂ ಪ್ರೋತ್ಸಾಹ ನೀಡಬೇಕು. ಕ್ರೀಡಾ ಚಟುವಟಿಕೆಗೆ ಅಗತ್ಯ ಸಹಕಾರ ನೀಡುತ್ತೇನೆ. ನೆಹರು ಮೈದಾನದಲ್ಲಿ ವೇದಿಕೆ, ಶೌಚಗೃಹ, ಡ್ರೆಸ್ಸಿಂಗ್ ರೂಂ ನಿರ್ಮಾಣಕ್ಕಾಗಿ 40 ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಇ.ಪರಶುರಾಮಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಾಲತೇಶ್, ನಗರಸಭಾ ಸದಸ್ಯರಾದ ಗಣಪತಿ ಮಂಡಗಳಲೆ, ರವಿ ಲಿಂಗನಮಕ್ಕಿ, ಪ್ರಮುಖರಾದ ಕಲಸೆ ಚಂದ್ರಪ್ಪ, ಕೆ.ಜಗನ್ನಾಥ್, ಮಂಜುನಾಥ್, ಗವಿಯಪ್ಪ, ಪ್ರಭು, ಚಂದ್ರಪ್ಪ ಈಳಿ, ಶಾರದಾ, ಡಾ. ಅನ್ನಪೂರ್ಣಾ, ಮಹೇಶ್ ಇತರರಿದ್ದರು.