ಬೆಂಗಳೂರು: ರಾಜಧಾನಿಯಿಂದ ವಿವಿಧ ಜಿಲ್ಲೆಗಳಿಗೆ ತೆರಳುವ ವಲಸೆ ಕಾರ್ಮಿಕರಿಗಾಗಿ ರಾಜ್ಯ ಸರ್ಕಾರವೇನೋ ಬಸ್ ವ್ಯವಸ್ಥೆ ಮಾಡಿತು. ಆದರೆ, ಆರಂಭದಲ್ಲಿ ನಿಗದಿಪಡಿಸಿದ್ದ ಟಿಕೆಟ್ ದರ ಕಾರ್ಮಿಕರ ಕಣ್ಣೀರಿಗೆ ಕಾರಣವಾಗಿತ್ತು. ಪ್ರತಿ ಟಿಕೆಟ್ಗೆ ಸಾವಿರಾರು ರೂ. ನೀಡಿ ಪ್ರಯಾಣಿಸಬೇಕಿತ್ತು. ಅಷ್ಟೊಂದು ಹಣ ಇದಿದ್ದೇ ಆದರೆ, ನಾವೇಕೆ ಊರಿಗೆ ಹೋಗುತ್ತಿದ್ದೇವು? ಅದೇ ಹಣದಲ್ಲಿ ಇಲ್ಲೇ ಕಾಲ ಕಳೆಯುತ್ತಿದ್ದೇವು ಎಂದು ಸಾರಿಗೆ ಸಂಸ್ಥೆಯನ್ನೇ ಪ್ರಶ್ನಿಸಿದ್ದರು. ಇದಾಗಿ ಎರಡು ದಿನಗಳ ಬಳಿಕ ಸರ್ಕಾರ ಊಟ, ನೀರಿನ ವ್ಯವಸ್ಥೆಯೊಂದಿಗೆ ಉಚಿತವಾಗಿ ತೆರಳಲು ಅವಕಾಶ ಮಾಡಿಕೊಟ್ಟಿದ್ದು, ಸಂತಸದ ವಿಷಯ.
ಇದು ರಾಜ್ಯದ ಕಾರ್ಮಿಕರ ಸಮಸ್ಯೆಯಾದರೆ, ಹೊರ ರಾಜ್ಯಗಳ ವಲಸೆ ಕಾರ್ಮಿಕರ ಸಮಸ್ಯೆ ಇದಕ್ಕಿಂತ ಭಿನ್ನವಾಗೇನಿಲ್ಲ. ಹೊರ ರಾಜ್ಯಗಳ ವಲಸೆ ಕಾರ್ಮಿಕರನ್ನು ಇಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಆಯಾ ರಾಜ್ಯಗಳು ಅವರನ್ನು ಕರೆಯಿಸಿಕೊಳ್ಳಬೇಕು ಎಂದು ದುಂಬಾಲು ಬಿದ್ದಿದ್ದವು. ತೀರಾ ಸಂಕಷ್ಟದಲ್ಲಿರುವವರನ್ನು ಕೆಲ ರಾಜ್ಯಗಳು ಬಸ್ ಮೂಲಕ ಕರೆಯಿಸಿಕೊಂಡಿದ್ದವು.
ವಲಸೆ ಕಾರ್ಮಿಕರ ಸಂಚಾರಕ್ಕೆ ಅನುಕೂಲವಾಗಲೆಂದೇ, ಕೇಂದ್ರವು ರೈಲ್ವೆ ಸೇವೆಯನ್ನು ಒದಗಿಸುತ್ತಿದೆ. ಈ ಹಿಂದೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಈಗ ಇದರ ಮೊತ್ತವನ್ನು ರಾಜ್ಯ ಸರ್ಕಾರಗಳಿಂದ ವಸೂಲು ಮಾಡಲು ಮುಂದಾಗಿರುವ ಇಲಾಖೆಯ ಕ್ರಮ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ರೈಲು ನಿಲ್ದಾಣಕ್ಕೆ ಕರೆತರುವ ಹೊಣೆ ರಾಜ್ಯ ಸರ್ಕಾರದ್ದಾಗಿದೆ ಎಂದು ಹೇಳಲಾಗಿತ್ತು. ಜತೆಗೆ, ಅವರಿಂದ ನಿಗದಿತ ಟಿಕೆಟ್ ದರವನ್ನು ವಸೂಲಿ ಮಾಡಿ ಇಲಾಖೆಗೆ ಪಾವತಿಸುವಂತೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣ ಟಿಕೆಟ್ ದರವನ್ನು ಪಕ್ಷ ಭರಿಸಲಿದೆ ಎಂದು ಘೋಷಿಸಿದೆ. ಇದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವದಂತೂ ಸತ್ಯ.
ಇದನ್ನೂ ಓದಿ; ಇದು…. ಏಲಿಯನ್ಗಳದ್ದೇ ಕೃತ್ಯ…!
ಪ್ರಧಾನಿ ನಿಧಿಗೆ 150 ಕೋಟಿ ರೂ.ಗಳನ್ನು ನೀಡಿರುವ ಇಲಾಖೆಗೆ ವಲಸೆ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ರಾಜ್ಯ ಸರ್ಕಾರ ಘೋಷಿಸಿದಂತೆ, ಕೇಂದ್ರ ಸರ್ಕಾರ ಕೂಡ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದರೆ ಅಚ್ಚರಿಯೇನಿಲ್ಲ...! ಆದರೆ, ಆದಷ್ಟು ಬೇಗ ಈ ಕಾರ್ಯವಾಗಬೇಕಿದೆ.