ನ್ಯೂಸ್

ಗುತ್ತಿಗೆ ಸೇವೆಗಳೇ ಹೈಜಾಕ್!; ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಪ್ರಭಾವಿಗಳ ಆಪ್ತರ ಕೈಚಳಕ

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಇತ್ತೀಚೆಗೆ ಪ್ರಭಾವಿಗಳ ಆಪ್ತರ ‘ಮ್ಯಾನೇಜ್​ವೆುಂಟ್’ ಕೈಚಳಕ ವಿಪರೀತ ಹೆಚ್ಚಳಗೊಂಡಿರುವುದರಿಂದ ಕಾರ್ಯಾಂಗ ತಲೆಚಚ್ಚಿಕೊಳ್ಳುವಂತಾಗಿದೆ. ಜತೆಗೆ ಕಾಲಾನುಕಾಲದಿಂದ ನಿರ್ದಿಷ್ಟ ವೃತ್ತಿ ನಡೆಸಿಕೊಂಡು ಬರುತ್ತಿರುವವರನ್ನೂ ಹೈರಾಣಾಗಿಸಿದೆ.

ಸರ್ಕಾರದ ನಿತ್ಯ ಚಟುವಟಿಕೆ ಹೊರತಾಗಿ ವಿಶೇಷ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನೆ, ಪ್ರಚಾರದ ಚಟುವಟಿಕೆ, ವಿವಿಧ ಸೇವೆಗಳ ನೀಡಿಕೆ, ಕಾಮಗಾರಿ, ದುರಸ್ತಿಗೆ ಸಂಬಂಧಿಸಿದ ಕಾರ್ಯದಲ್ಲಿ ‘ಹಸ್ತ’ಕ್ಷೇಪ ಹೆಚ್ಚಾಗಿರುವ ಕೂಗು ಕೇಳಿಬಂದಿದೆ. ಸಚಿವರು, ಶಾಸಕರು, ಪ್ರಧಾನ ಕಾರ್ಯದರ್ಶಿ ಹಾಗೂ ಮೇಲ್ಪಟ್ಟ ಅಧಿಕಾರಿಗಳ ಪೈಕಿ ಕೆಲವರು ತಮ್ಮ ಕುಟುಂಬ ಸದಸ್ಯರು ಹಾಗೂ ಆಪ್ತರಿಗೆ ಸರ್ಕಾರದ ಕೆಲಸವನ್ನು ಅಡೆತಡೆ ಇಲ್ಲದೆ ಹಂಚಿಕೆ ಮಾಡುತ್ತಿದ್ದಾರೆ.

ಇದು ಅಡ್ಡದಾರಿಯಾದರೂ ಸಕ್ರಮವಾಗಿಯೇ ನಡೆಯುತ್ತಿದೆ. ಸ್ವಜನಪಕ್ಷಪಾತದ ಸ್ಪಷ್ಟ ನಿದರ್ಶ ನವೂ ಹೌದು. ವಿಜಯವಾಣಿ ಈ ಕೈಚಳಕದ ಮಾಹಿತಿ ಕೆದಕಿದಾಗ ಈ ಬೆಳವಣಿಗೆಗೆ ಪೂರಕವಾಗಿ ಹತ್ತಾರು ಉದಾಹರಣೆಗಳು ಕಣ್ಣ ಮುಂದೆ ಬಂದವು. ಸರ್ಕಾರಿ ಕಾಮಗಾರಿ ನಡೆಸುವ ಗುತ್ತಿಗೆದಾರರೊಬ್ಬರು ಹೇಳುವಂತೆ, ‘ಇದು ಹಿಂದಿನಿಂದಲೂ ಇರುವುದೇ. ಆದರೆ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿತ್ತು. ಇತ್ತೀಚಿಗೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇದು ಅವ್ಯವಹಾರಕ್ಕೂ ಕಾರಣ, ಪಾರದರ್ಶಕ ಆಡಳಿತಕ್ಕೂ ಹೊಂದದ ಬೆಳವಣಿಗೆ’ ಎಂದು ಬೇಸರ ಹೊರಹಾಕಿದರು.

ತೆರೆಮರೆಯಲ್ಲೇ ಫಿಕ್ಸ್: ಸರ್ಕಾರದ ಕಾರ್ಯಕ್ರಮವೊಂದು ನಿರ್ಧಾರವಾಗುತ್ತಿದ್ದಂತೆಯೇ ತೆರೆಮರೆಯಲ್ಲಿ ಫಿಕ್ಸಿಂಗ್ ಚಟುವಟಿಕೆ ಆರಂಭವಾಗುತ್ತದೆ. ಕಾರ್ಯಕ್ರಮ ನಡೆಯುವುದು ಒಂದು ಸ್ಪಷ್ಟ ರೂಪ ಪಡೆದುಕೊಳ್ಳುವುದರೊಳಗೆ ಅದನ್ನು ಯಾರು ನಿರ್ವಹಿಸಬೇಕೆಂಬುದು ನಿರ್ಧಾರವಾಗಿಬಿಟ್ಟಿರುತ್ತದೆ.

ಅಧಿಕಾರಿ ಅಥವಾ ಸಚಿವರ ಆಪ್ತರಿಗೆ ವರ್ಕ್​ಆರ್ಡರ್ ಸಿಕ್ಕಿಹೋಗಿರುತ್ತದೆ. ಕರ್ನಾಟಕ ಪಾರದರ್ಶಕ ಕಾಯ್ದೆ ವಿನಾಯಿತಿಯ ದುರ್ಲಾಭ ಪಡೆದು 4ಜಿ ರಿಯಾಯಿತಿ ಮೂಲಕವೋ ಅಥವಾ ಅಲ್ಪಾವಧಿ ಟೆಂಡರ್ ಕರೆದು ಅಲ್ಲೂ ತಮ್ಮದೇ ‘ಡೆಮ್ಮಿ’ ಪ್ರಸ್ತಾವನೆ ಸಲ್ಲಿಕೆಯಾಗುವಂತೆ ಮಾಡಿ ಯಾರ ಹೆಸರಿಗೆ ಕೆಲಸ ನಿಗದಿಯಾಗಬೇಕೋ ಅವರಿಗೆ ಮಾಡಿಬಿಡಲಾಗುತ್ತದೆ.

ತೆರೆಮರೆಯಲ್ಲೇ ಫಿಕ್ಸ್: ಸರ್ಕಾರದ ಕಾರ್ಯಕ್ರಮವೊಂದು ನಿರ್ಧಾರವಾಗುತ್ತಿದ್ದಂತೆಯೇ ತೆರೆಮರೆಯಲ್ಲಿ ಫಿಕ್ಸಿಂಗ್ ಚಟುವಟಿಕೆ ಆರಂಭವಾಗುತ್ತದೆ. ಕಾರ್ಯಕ್ರಮ ನಡೆಯುವುದು ಒಂದು ಸ್ಪಷ್ಟ ರೂಪ ಪಡೆದುಕೊಳ್ಳುವುದರೊಳಗೆ ಅದನ್ನು ಯಾರು ನಿರ್ವಹಿಸಬೇಕೆಂಬುದು ನಿರ್ಧಾರವಾಗಿಬಿಟ್ಟಿರುತ್ತದೆ. ಅಧಿಕಾರಿ ಅಥವಾ ಸಚಿವರ ಆಪ್ತರಿಗೆ ವರ್ಕ್​ಆರ್ಡರ್ ಸಿಕ್ಕಿಹೋಗಿರುತ್ತದೆ. ಕರ್ನಾಟಕ ಪಾರದರ್ಶಕ ಕಾಯ್ದೆ ವಿನಾಯಿತಿಯ ದುರ್ಲಾಭ ಪಡೆದು 4ಜಿ ರಿಯಾಯಿತಿ ಮೂಲಕವೋ ಅಥವಾ ಅಲ್ಪಾವಧಿ ಟೆಂಡರ್ ಕರೆದು ಅಲ್ಲೂ ತಮ್ಮದೇ ‘ಡೆಮ್ಮಿ’ ಪ್ರಸ್ತಾವನೆ ಸಲ್ಲಿಕೆಯಾಗುವಂತೆ ಮಾಡಿ ಯಾರ ಹೆಸರಿಗೆ ಕೆಲಸ ನಿಗದಿಯಾಗಬೇಕೋ ಅವರಿಗೆ ಮಾಡಿಬಿಡಲಾಗುತ್ತದೆ.

ಪಾಲುದಾರಿಕೆ ವ್ಯವಹಾರ: ಸಚಿವರು ಅಥವಾ ಶಾಸಕರ ಸಂಬಂಧಿ, ಅಧಿಕಾರಿಗಳ ಮಕ್ಕಳ ಹೆಸರಲ್ಲಿ ಕಂಪನಿ ಸೃಷ್ಟಿಸಿ ಆ ಕಂಪನಿಗೆ ಕೆಲಸ ಸಿಗುವಂತೆ ಮಾಡುವುದು ಒಂದು ಬಗೆಯ ವ್ಯವಹಾರ. ಇನ್ನೊಂದು ಆಪ್ತರು ಅಥವಾ ಕುಟುಂಬಸ್ಥರು ಹಾಲಿ ಸೇವೆ ನೀಡುವ ಕಂಪನಿ ಅಥವಾ ಗುತ್ತಿಗೆದಾರರಿಗೆ ಉಪ ಗುತ್ತಿಗೆ ನೀಡುವ ಮೂಲಕ ಕಿಸೆ ಭರ್ತಿ ಮಾಡಿಕೊಳ್ಳುವುದು ಇನ್ನೊಂದು ಬಗೆ. ಇದೆರೆಡೂ ಸಹ ರಾಜ್ಯದಲ್ಲಿ ಪ್ರಚಲಿತದಲ್ಲಿದೆ ಎಂದು ಹೇಳಲಾಗುತ್ತಿದೆ.

ಟೆಲಿಗ್ರಾಮ್ ಆದೇಶಕ್ಕೆ ಕೋಟಿ ಕೋಟಿ ಲೂಟಿ

ಪ್ರಭಾವಿ ಸಚಿವರೊಬ್ಬರ ಆಪ್ತರಾಗಿ ಮೂರ್ನಾಲ್ಕು ಪ್ರಮುಖ ಇಲಾಖೆಗೆ ಬಾಸ್ ಆಗಿರುವ ಪ್ರಧಾನ ಕಾರ್ಯದರ್ಶಿ ದರ್ಜೆಯ ಐಎಎಸ್ ಅಧಿಕಾರಿಯೊಬ್ಬರು ಆ ಸಚಿವರ ಬೇಕು ಬೇಡಗಳನ್ನು ನೋಡಿಕೊಳ್ಳಬೇಕೆಂಬ ನೆಪವೊಡ್ಡಿ ಹತ್ತಾರು ಸಲಹೆಗಾರರಿಗೆ ತಮ್ಮ ವ್ಯಾಪ್ತಿಯ ನಿಗಮಗಳ ಮೂಲಕ ಕೋಟ್ಯಂತರ ರೂಪಾಯಿ ನೀಡುತ್ತಿರುವುದು ದಾಖಲೆಗಳಲ್ಲಿದೆ. ಕೋಟಿ ಆದಾಯ ಗಳಿಸಲು ರಕ್ತ ಬಸಿಯುವ ಆ ಸಂಸ್ಥೆಗಳಿಗೆ ಇಂತಹ ಕೆಲಸಕ್ಕೆ ಬಾರದ ಸಲಹಾ ಸಂಸ್ಥೆಗಳಿಂದ ಒಂದೇ ಒಂದು ರೂಪಾಯಿ ಪ್ರಯೋಜನವಿಲ್ಲ. ಆದರೆ, ಸಚಿವರ ಹೆಸರಿನಲ್ಲಿ ನಡೆಯುವ ದಂಧೆಗಳಿಗೆ ಮಾತ್ರ ಈ ಅಧಿಕಾರಿ ಟೆಲಿಗ್ರಾಮ್ಲ್ಲಿ ಹೇಳುವ ಮಾತೇ ಆದೇಶವಾಗಿರುತ್ತದೆ. ಕೆಳಗಿನ ಅಮಾಯಕರು ಅನಿವಾರ್ಯವಾಗಿ ಕೇಳಲೇಬೇಕು. ಮುಂದೆ ಎಂದೋ ಅದು ತನಿಖೆಯಾದರೆ ಸಹಿ ಮಾಡಿದವ ಜವಾಬ್ದಾರನಾಗುತ್ತಾನೆ. ‘ಟೆಲಿಗ್ರಾಮ್ ಕಿಂಗ್’ ಬಚಾವಾಗುತ್ತಾನೆ ಎಂಬ ಅಭಿಪ್ರಾಯವಿದೆ.

ಸರ್ಕಾರದಲ್ಲಿರುವ ಚರ್ಚೆ

1.ಪ್ರಧಾನ ಕಾರ್ಯದರ್ಶಿ ಹಂತದ ಅಧಿಕಾರಿಯೊಬ್ಬರು ಮೂರು ಖಾಸಗಿ ಕಂಪನಿಗಳನ್ನು ಬೇನಾಮಿ ಸ್ವರೂಪದಲ್ಲಿ ನಿರ್ವಹಿಸುತ್ತಿದ್ದಾರೆ, ಸರ್ಕಾರದ ಪ್ರಚಾರ ಸೇವೆಗಳು ಅವುಗಳಿಗೇ ಸಿಗುವಂತೆ ಮಾಡಲಾಗುತ್ತಿದೆ.

2.ಸರ್ಕಾರದ ಹಾಸ್ಟೆಲ್​ಗೆ ವಿವಿಧ ರೀತಿಯ ಪರಿಕರ ಒದಗಿಸುವುದು ಸಚಿವರೊಬ್ಬರ ಸಹೋದರನಿಗೆ ಸೇರಿದ ಹೊಸದಾಗಿ ಸೃಷ್ಟಿಯಾದ ಕಂಪನಿ ಎಂಬುದು ವಿಧಾನಸೌಧ ಮೂರನೇ ಮಹಡಿಯಲ್ಲಿ ಬಹು ರ್ಚಚಿತ ವಿಷಯ

3.ಶಾಸಕಾಂಗದ ಪ್ರಮುಖ ಹುದ್ದೆಯಲ್ಲಿರುವವರ ಸಮೀಪದ ಸಂಬಂಧಿ ವಿಧಾನಸೌಧದ ಪ್ರಮುಖ ಸೇವೆ ಒದಗಿಸುವುದರಲ್ಲಿ ಎತ್ತಿದ ಕೈ. ಅವರಿಗೆ ವೃತ್ತಿ ಅನುಭವವೂ ಇಲ್ಲ, ಪೈಪೋಟಿಯೂ ಇಲ್ಲ. ಪ್ರಭಾವವೇ ಇಲ್ಲಿ ಮುಖ್ಯ

4.ಮಹಿಳಾ ಐಎಎಸ್ ಅಧಿಕಾರಿಯೊಬ್ಬರ ಮಕ್ಕಳು, ಕುಟುಂಬ ಸದಸ್ಯರನ್ನೊಳಗೊಂಡ ಐವರು ನಿರ್ದೇಶಕರ ಕಂಪನಿಯೊಂದು ಕಾರ್ಯ ನಿರ್ವಹಿಸುತ್ತಿದ್ದು, ಅದು ಕೆಲಸ ಪಡೆದುಕೊಳ್ಳುವುದು ಬಲು ಸಲೀಸು. ಅಡೆತಡೆಯೂ ಇಲ್ಲ, ಗುಟ್ಟು ಬಹಿರಂಗವಾಗುವುದೂ ಇಲ್ಲ

5.ಕಾರ್ಯದರ್ಶಿ ಹಂತದ ಅಧಿಕಾರಿಯೊಬ್ಬರು ತಮ್ಮ ಬೀಗರನ್ನು ರಾತ್ರೋರಾತ್ರಿ ಕ್ಲಾಸ್ ಒನ್ ಗುತ್ತಿಗೆದಾರರನ್ನಾಗಿ ಮಾಡಿ ಅವರಿಗೆ ಕೆಲಸ ಸಿಗುವಂತೆ ಮಾಡಿರುವುದು ಅಚ್ಚರಿಯೊಳಗೊಂದು ಮಹಾಅಚ್ಚರಿ

6.ಪ್ರಭಾವಿಗಳ ಆಪ್ತವಲಯದಲ್ಲಿ ಗುರುತಿಸಿಕೊಂಡವರ ಕಾರು ಚಾಲಕರು ನಿರ್ದೇಶಕರಾಗಿರುವ ಕಂಪನಿಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ ಧಾರಾಳವಾಗಿ ಹಣ ಹರಿದಿತ್ತು. ಮಾಹಿತಿ ಹಕ್ಕು ಕಾಯ್ದೆ ಅಡಿ ದಾಖಲೆಗಳನ್ನು ಪಡೆಯುವುದಕ್ಕೂ ಆರ್​ಟಿಐ ಕಾರ್ಯಕರ್ತರಿಗೆ ಸಾಧ್ಯವಾಗದೇ ಹೋಗಿತ್ತು

ಸರ್ಕಾರಕ್ಕೇನು ನಷ್ಟ?

1.ಕಾಮಗಾರಿ ಅಥವಾ ಸೇವೆಯ ಫಿಕ್ಸಿಂಗ್ ಮಾಡುವುದರಿಂದ ಪೈಪೋಟಿ ಇಲ್ಲದೆ ಬೊಕ್ಕಸಕ್ಕೆ ಹೊರೆಯಾಗುತ್ತದೆ

2.ಪ್ರಭಾವ ಬಳಸಿ ಅವಕಾಶ ಪಡೆದವರು ನೀಡುವ ಸೇವೆ ಬಗ್ಗೆ ಅಧಿಕಾರಿ ವೃಂದ ಸೊಲ್ಲೆತ್ತುವುದಿಲ್ಲ. ದೋಷವಾದರೂ ಒಪು್ಪವ ಅನಿವಾರ್ಯತೆ

3.ಪಾರದರ್ಶಕ ಪ್ರಕ್ರಿಯೆ ಇಲ್ಲದೆ ಒಳಗೊಳಗೆ ಫಿಕ್ಸಿಂಗ್ ಆಗುವ ಕಾರಣ ಅನಗತ್ಯವಾಗಿ ತೆರಿಗೆ ಹಣ ಪೋಲಾಗುತ್ತದೆ

4.ಭ್ರಷ್ಟಾಚಾರಕ್ಕೆ ಪರೋಕ್ಷ ಪ್ರೋತ್ಸಾಹ ಕೊಡುವುದರಿಂದ ವ್ಯವಸ್ಥೆಯಲ್ಲಿನ ವಾತಾವರಣ ಹದಗೆಡಲಿದೆ

5.ಅಡ್ಡದಾರಿಯ ವ್ಯವಹಾರದಿಂದ ಗುಣಮಟ್ಟದ ಸೇವೆ ಸಿಗುವುದೇ ಇಲ್ಲ. ವೃತ್ತಿಪರತೆ ಇರಲ್ಲ. ಇದು ಆಡಳಿತಯಂತ್ರಕ್ಕೆ ತೊಂದರೆ ನಿಶ್ಚಿತ

ಅಸೆಂಬ್ಲಿಯಲ್ಲೂ ಪ್ರತಿಧ್ವನಿ

ರಾಜಕಾರಣಿಗಳು ತಮಗೆ ಅನುಕೂಲ ಮಾಡಿಕೊಟ್ಟವರ ಋಣ ತೀರಿಸಿದ ಪ್ರಕರಣಗಳು ಹತ್ತು ಹಲವು. ಈ ಕುರಿತ ಕೆಲವು ಪ್ರಕರಣಗಳು ಲೋಕಾಯುಕ್ತದಲ್ಲೂ ತನಿಖೆಯಾಗುತ್ತಿದೆ, ರಾಜಭವನಕ್ಕೂ ದೂರು ಸಲ್ಲಿಕೆಯಾಗಿದೆ. ಸರ್ಕಾರಕ್ಕೆ ಸಲ್ಲಿಕೆಯಾದ ಪ್ರಸ್ತಾವನೆ ‘ಚಿರತೆ ವೇಗದಲ್ಲಿ’ ಅನುಮತಿ ಪಡೆದುಕೊಂಡ ಪ್ರಕರಣವೊಂದು ಸಾಕಷ್ಟು ಸದ್ದು ಮಾಡಿತ್ತು. ವೃತ್ತಿ ಅನುಭವವೇ ಇಲ್ಲದ ಕಂಪನಿಗೆ ಫಟಾಫಟ್ ಏಳು ಕೋಟಿ ರೂ. ಪಾವತಿ ಮಾಡಿದ್ದ ಒಂದು ಘಟನೆಯನ್ನು ವಿಧಾನಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಸ್ತಾಪಿಸಿದ್ದರು. ಬಿಜೆಪಿ ಸದಸ್ಯರಾದ ಎನ್. ರವಿಕುಮಾರ್, ಚಂದ್ರಕಾಂತ್ ಬೆಲ್ಲದ್ ಸಹ ಪ್ರಸ್ತಾಪಿಸಿದ್ದರು.

ಈ ಸರ್ಕಾರದಲ್ಲಿ ಸಚಿವರ ಆಪ್ತರಿಗೆ ಮಾತ್ರ ಅವಕಾಶ ಎಂಬ ವಾತಾವರಣ ಇದೆ. ಸ್ವಾರ್ಥ, ಸ್ವಜನಪಕ್ಷಪಾತ ಹೆಚ್ಚಾಗಿದೆ. ಪಾರದರ್ಶಕತೆ ಇಲ್ಲದ ಕಾರ್ಯನಿರ್ವಹಣೆ ಹೆಚ್ಚಾಗಿದೆ. ಇದೊಂದು ಜನ ವಿರೋಧಿ ಸರ್ಕಾರ.| ಎನ್.ರವಿಕುಮಾರ್ ಪರಿಷತ್ ವಿಪಕ್ಷ ಮುಖ್ಯ ಸಚೇತಕ