ನ್ಯೂಸ್

ನಿವೇಶನ ನೀಡುವಂತೆ ಆಗ್ರಹಿಸಿ ನಿರಂತರ ಧರಣಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಇದುವರೆಗೂ ನಿವೇಶನ ಹಂಚೇ ಇರುವುದನ್ನು ಖಂಡಿಸಿ ಸೋಗಾನೆ ಭೂಮಿ ಹಕ್ಕು ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಅ.9ರ ಬೆಳಿಗ್ಗೆ 10ರಿಂದ ಅನಿರ್ಧಿಷ್ಟಾವಧಿ ಧರಣಿಯನ್ನು ಏರ್‌ಪೋರ್ಟ್‌ನ ಮುಖ್ಯ ಧ್ವಾರದ ಮುಂಭಾಗ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಬಿ.ಕೃಷ್ಣಪ್ಪ ತಿಳಿಸಿದರು.

ವಿಮಾನ ನಿಲ್ದಾಣಕ್ಕಾಗಿ ನಮ್ಮ ಭೂಮಿಯನ್ನು ಕಳೆದುಕೊಂಡಿದ್ದೇವೆ. ನಮಗೆ ನಿವೇಶನ ವಿತರಿಸಲು ಸರ್ಕಾರದಿಂದ ಆದೇಶವಾಗಿತ್ತು. ನ್ಯಾಯಾಲಯವೂ ನಿವೇಶನ ವಿತರಣೆ ಮಾಡುವಂತೆ ಆದೇಶ ನೀಡಿತ್ತು. ವಿಮಾನ ನಿಲ್ದಾಣ ಉದ್ಘಾಟನೆಗೂ ಮುನ್ನ ನಿವೇಶನ ನೀಡಬೇಕಿತ್ತು. ಉದ್ಘಾಟನೆ ದಿನದಂದು ಇದಕ್ಕಾಗಿ ಪ್ರತಿಭಟನೆ ನಡೆಸಿದಾಗ ಜಿಲ್ಲಾಡಳಿತ ನಿವೇಶನ ಹಂಚಿಕೆ ಪತ್ರ ನೀಡಿತ್ತು. ಕೆಲವರು ಇದನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿ ತಡಯಾಜ್ಞೆ ತಂದಿದ್ದರು. ಆದರೆ ಕಾನೂನು ಹೋರಾಟದ ಮೂಲಕ ನಾವೆಲ್ಲರೂ ಸೇರಿಕೊಂಡು ತಡೆಯಾಜ್ಞೆ ತೆರವು ಮಾಡಿದ್ದೇವೆ ಎಂದರು.

ಕಾನೂನು ಪ್ರಕ್ರಿಯೆಯಲ್ಲಿ ಗೆಲುವು ಸಿಕ್ಕಿದ್ದರೂ ನಿವೇಶನ ನೀಡಿಲ್ಲ. ಏರ್‌ಪೋರ್ಟ್‌ಗೆ ಭೂಮಿ ನೀಡಿದ ರೈತರಿಗೆ ಮೂರು ತಿಂಗಳಲ್ಲಿ ನಿವೇಶನ ಹಂಚಿಕೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ನ್ಯಾಯ ಸಿಗುವವರೆಗೂ ಅನಿರ್ಧಿಷ್ಟ ಕಾಲಾವಧಿವರೆಗೆ ಧರಣಿ ನಡೆಸುತ್ತೇವೆ. ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂಧನೆ ಕೇಸನ್ನು ದಾಖಲಿಸುತ್ತೇವೆ. ಕಾನೂನು ಮತ್ತು ಬೀದಿ ಹೋರಾಟ ಮುಂದುವರಿಯಲಿದೆ ಎಂದರು.

ವಿಮಾನ ನಿಲ್ದಾಣ ಭೂಮಿ ನೀಡಿದ ರೈತರಾದ ಶಿವಾನಂದ, ರಾಮಣ್ಣ, ನಾಗರಾಜ್, ಎನ್.ಟಿ.ಕುಮಾರ್, ವೀರಭದ್ರ, ರಾಘವೇಂದ್ರ, ಬಸವಲಿಂಗಪ್ಪ, ರಾಮಣ್ಣ, ರಂಗಪ್ಪ, ಮಹಾದೇವ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.