ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಭಾರಿ ಏರಿಕೆಯಾಗಿದೆ. ತುಂಗಾ ಜಲಾಶಯಕ್ಕೆ ಸೋಮವಾರ 10,499 ಕ್ಯೂಸೆಕ್ ನೀರು ಹರಿದುಬಂದಿದೆ. ಲಿಂಗನಮಕ್ಕಿ ಜಲಾಶಯದ ಒಳಹರಿವು 17,530ಕ್ಕೆ ತಲುಪಿತ್ತು. ಜೋಗ ಜಲಪಾತಕ್ಕೆ ಮಳೆ ಜೀವಕಳೆ ಬಂದಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.
ಸೋಮವಾರ ಬೆಳಗ್ಗೆಗೆ ಕೊನೆಗೊಂಡಂತೆ 24 ತಾಸಿನಲ್ಲಿ ತೀರ್ಥಹಳ್ಳಿ ಅತಿಹೆಚ್ಚು ಮಳೆಯಾಗಿದೆ. ಆಗುಂಬೆಯಲ್ಲಿ 116.2ಮಿಮೀ, ಹೊನ್ನೆತಾಳು 105.5, ಬಿದರಗೋಡು 93, ಅರಗ 68.5, ಮುಳಬಾಗಿಲಿನಲ್ಲಿ 67 ಮಿಮೀ ಮಳೆ ಬಿದ್ದಿದೆ. ಹೊಸನಗರ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಜೋರು ಮಳೆಯಾಗುತ್ತಿದೆ. ಮಾಸ್ತಿಕಟ್ಟೆ, ಹುಲಿಕಲ್, ಸಾವೆಹಕ್ಲು, ಮಾಣಿ, ಯಡೂರು ಭಾಗದಲ್ಲಿ ರಭಸದಿಂದ ಮಳೆ ಸುರಿಯುತ್ತಿದೆ.
ಸೋಮವಾರ ಸಂಜೆ ವೇಳೆಗೆ ತುಂಗಾ ಜಲಾಶಯದ ಹೊರಹರಿವನ್ನು ಹೆಚ್ಚಿಸಲಾಯಿತು. 7 ಕ್ರಸ್ಟ್‌ಗೇಟ್ ಹಾಗೂ ಪವರ್‌ಹೌಸ್ ಮೂಲಕ ಒಟ್ಟು 12 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಿಗೆ ತಲಾ ಒಂದು ನೀರು ಹರಿದು ಬಂದಿದೆ.
ಸೋಮವಾರ ಶಿವಮೊಗ್ಗ ನಗರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿತ್ತು. ಅಲ್ಲಲ್ಲಿ ಕೊಂಚ ಮಳೆಯಾಗಿದ್ದನ್ನು ಹೊರತುಪಡಿಸಿದರೆ ಜನಜೀವನದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಲಿಲ್ಲ. ಸೂರ್ಯನ ದರ್ಶನ ವಿರಳವಾಗಿತ್ತು. ದಿನದ ಬಹುತೇಕ ಸಮಯ ಮೋಡ ಕವಿದ ವಾತಾವರಣವಿತ್ತು.