ಹನಗೋಡು್: ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿಯೂ ಮಳೆ ಆರ್ಭಟ ಮುಂದುವರಿಯಿತು. ತಂಬಾಕು ಹದ ಮಾಡುವ ಬ್ಯಾರನ್ ಗಳು, ವಾಸದ ಮನೆಗಳಿಗೆ ಹಾನಿಯಾಗಿದೆ. ತಂಬಾಕು ಹಾಗೂ ಶುಂಠಿ ಹೊಲಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ಬೆಳೆಗಳು ಕೊಳೆಯುವ ಭೀತಿ ಎದುರಾಗಿದೆ.
ಸೋಮವಾರ ರಾತ್ರಿ ಬಿದ್ದ ಅಧಿಕ ಮಳೆಗೆ ಹನಗೋಡು ಹೋಬಳಿಯ ಹರೀನಹಳ್ಳಿಯ ರುದ್ರಾರಾಧ್ಯರ ಪತ್ನಿ ಲಲಿತಮ್ಮ ಅವರ ತಂಬಾಕು ಬ್ಯಾರನ್ ಕಟ್ಟಡದ ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಅರಸುಕಲ್ಲಹಳ್ಳಿಯ ಕುಮಾರ್ ಅವರ ವಾಸದ ಮನೆ ಕುಸಿದಿದೆ. ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬಿರುಗಾಳಿಗೆ ಹಾರಿದ ಛಾವಣಿ: ಚಿಲ್ಕುಂದದಲ್ಲಿ ಸೋಮವಾರ ರಾತ್ರಿ ಬಿರುಗಾಳಿಗೆ ರಾಮಶೆಟ್ಟರ ಮನೆ ಛಾವಣಿ ಹಾಗೂ ಚಂದ್ರು ಅವರ ಕೊಟ್ಟಿಗೆಗೆ ಹಾಕಿದ್ದ ಕಲ್ನಾರ್ ಶೀಟ್‌ಗಳು ಹಾರಿ ಹೋಗಿದ್ದು, ಮನೆಯೊಳಗಿದ್ದ ದವಸ, ಧಾನ್ಯ, ಬಟ್ಟೆ, ಮತ್ತಿತರ ಪದಾರ್ಥಗಳು ಮಳೆನೀರಿನಲ್ಲಿ ತೋಯ್ದು ಹಾಳಾಗಿವೆ. ಬಿ.ಆರ್ ಕಾವಲ್ ಬೋವಿ ಕಾಲನಿಯ ಮಾದೇವ ಬೋವಿ, ಕೂಡ್ಲೂರಿನ ಅಲ್ಪೋನ್ಸ್ ಮೇರಿ, ಅತ್ತಿಗುಪ್ಪೆಯ ರಂಗಯ್ಯ ಅವರ ವಾಸದ ಮನೆಗಳ ಸಹ ಹಾನಿಗೊಳಲಾಗಿವೆ.
ಬಿತ್ತಿದ್ದ ಜೋಳ ನಾಶ: ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳೇನಹಳ್ಳಿಯ ತಗ್ಗುಪ್ರದೇಶದ ಜಮೀನುಗಳಲ್ಲಿ ಅಪಾರ ಪ್ರಮಾಣದ ಮಳೆ ನೀರು ನಿಂತಿದ್ದು, ಎರಡು ದಿನಗಳ ಹಿಂದಷ್ಟೇ ನಟೇಶ್, ಶ್ರೀನಿವಾಸ, ಆನಂದ, ಕಲೀಂ ಮತ್ತಿತರ ರೈತರು ಬಿತ್ತನೆ ಮಾಡಿದ್ದ ಮುಸುಕಿನ ಜೋಳ ರಸಗೊಬ್ಬರ ಸಹಿತ ನೀರುಪಾಲಾಗಿದೆ.
ಕೋಡಿ ಒಡೆದ ನಾಗಮಂಗಲ ಕೆಂಪಿ ಕೆರೆ: ನಾಗಮಂಗಲ ಗ್ರಾಮದ ಕೆಂಪಿ ಕೆರೆ ತುಂಬಿ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಜಮೀನುಗಳಲ್ಲಿ ಹರಿದು ಬೆಳೆ ನಾಶವಾಗಿದೆ. ಅಲ್ಲದೆ ಅತ್ತಿಕುಪ್ಪೆ ಕೆರೆಯ ಕೋಡಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಜಮೀನಿನ ಮೇಲೆ ಹರಿದಿದೆ. ಕೆರೆ ಕೆಳ ಭಾಗದ ಅಡಕೆ, ತೆಂಗಿನತೋಟ, ಶುಂಠಿ, ತಂಬಾಕು ಜಮೀನು ಜಲಾವೃತವಾಗಿದ್ದು, ಕಣ್ಣು ಹಾಯಿಸಿದೆಲ್ಲೆಡೆ ಜಮೀನು ಕೆರೆಗಳಂತೆ ಗೋಚರಿಸುತ್ತಿವೆ.
ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ: ಹಗೋಡು ನಾಡಕಚೇರಿಯ ರಾಜಸ್ವ ನಿರೀಕ್ಷಕ ಪ್ರಶಾಂತರಾಜೇ ಅರಸ್, ಗ್ರಾಮ ಆಡಳಿತಾಧಿಕಾರಿಗಳಾದ ಸುಮಂತ್, ಸುನೀಲ್ ಅಂತೋಣಿರಾಜ್, ಮಲ್ಲೇಶ್, ಶಿವಕುಮಾರ್ ಅವರು ಅತ್ತಿಕುಪ್ಪೆಯ ಕೆರೆ ಕೋಡಿ ಒಡೆದು ಹಾನಿಗೊಳಗಾಗಿರುವ ಪ್ರದೇಶ ಹಾಗೂ ಕಲ್ಲಹಳ್ಳಿ, ತಟ್ಟೆಕೆರೆ, ಹೊಸಕೋಟೆ, ಕಚುವಿನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ, ಮನೆ, ಬ್ಯಾರನ್ ಹಾನಿ ಪರಿಶೀಲಿಸಿದರು.