ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಇಂದು ಭಾರತೀಯ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ದಾಳಿಯಲ್ಲಿ ಭಾರತೀಯ ಸೇನಾಪಡೆ ಎನ್‌ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಹೊಡೆದುರುಳಿಸಿದೆ.
ನಿನ್ನೆಯಷ್ಟೇ ಅಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರನ್ನು ಕೊಲ್ಲಲಾಗಿತ್ತು. ಇಂದು ಮತ್ತೋರ್ವ ಉಗ್ರನನ್ನು ಎನ್‌ಕೌಂಟರ್ ಮಾಡಲಾಗಿದೆ. ಸೋಮವಾರ ಸಂಜೆ ಆರಂಭವಾದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯು ಇನ್ನೂ ಮುಂದುವರೆದಿದೆ.
ಕುಲ್ಗಾಮ್ ಜಿಲ್ಲೆಯ ರೆಡ್ವಾನಿ ಪ್ರದೇಶದಲ್ಲಿ ಎನ್‌ಕೌಂಟರ್ ಸೈಟ್‌ನ ಸಮೀಪವಿರುವ ಮನೆಗಳ ಹುಡುಕಾಟದ ಸಮಯದಲ್ಲಿ, ಅಲ್ಲಿ ಅಡಗಿದ್ದ ಭಯೋತ್ಪಾದಕನೊಂದಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಹೆಚ್ಚಿನ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.
ಸೋಮವಾರ ರಾತ್ರಿ (ಮೇ 6) ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾದ ವಾಂಟೆಡ್ ಭಯೋತ್ಪಾದಕ ಬಸಿತ್ ದಾರ್ ಸೇರಿದಂತೆ ಇಬ್ಬರು ಉಗ್ರರು ಹತರಾಗಿದ್ದಾರೆ.