ಕೋಲಾರ: ಜಿಲ್ಲಾ ಕಾಂಗ್ರೆಸ್‌ನಲ್ಲಿನ ಒಳಜಗಳ ಮತ್ತೆ ಮುಂದುವರಿದಿದ್ದು, ಇದಕ್ಕೆ ಸೋಮವಾರ ನಡೆದ ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆ ಸಾಕ್ಷಿಯಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆಗ್ನೇಯ ಶಿಕ್ಷಕರ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ಒಳ ಜಗಳ ಮತ್ತೊಮ್ಮೆ ಜಗಜ್ಜಾಹೀರಾಗಿದ್ದು, ಸಭೆಯನ್ನು ಮೇ 24ಕ್ಕೆ ಮುಂದೂಡಲಾಯಿತು.
ಅಲ್ಪಸಂಖ್ಯಾರ ಮುಖಂಡರನ್ನು ಸಭೆಗಳಿಗೆ ಆಹ್ವಾನ ನೀಡಿಯೂ ಸಹ ವೇದಿಕೆಗೆ ಆಹ್ವಾನಿಸದೆ ಕಡೆಗಣಿಸಿರುವುದು ಸರಿಯಲ್ಲ ಎಂದು ಕೆಲ ಅಲ್ಪ ಸಂಖ್ಯಾತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸಗರಸಭೆ ಮಾಜಿ ಸದಸ್ಯ ಎಂ.ಜಾಫರ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ಮುಖಂಡರನ್ನು ಕಡೆಗಣಿಸುತ್ತಿದ್ದಾರೆ. ಕೇವಲ ಮತ ಹಾಕಲು ಸಿಮೀತವೇ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸಿರುವ ಮುಸ್ಲಿಂ ನಾಯಕರ ಹೆಸರನ್ನು ಹೇಳುತ್ತಿಲ್ಲ. ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ನಮ್ಮ ಪಾತ್ರವೂ ಇದೆ. ಆದರೆ, ಕೆಲವರು ಜಿಲ್ಲಾ ಕಾಂಗ್ರೆಸ್ ಘಟಕವನ್ನು ಹಾಳು ಮಾಡುತ್ತಿದ್ದಾರೆ, ಇಂತಹವರಿಂದ ಪಕ್ಷ ಉದ್ಧಾರ ಆಗುವುದಿಲ್ಲ ಎಂದು ಕಿಡಿಕಾರಿದರು.
ಸಭೆಗೆ ಬಂದ ಮುಸ್ಲಿಂ ಸಮುದಾಯದ ಒಬ್ಬ ನಾಯಕ ಮತ್ತು ಮುಖಂಡರ ಹೆಸರನ್ನು ಹೇಳುವ ಸೌಜನ್ಯ ಇಲ್ಲವಾಗಿದೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೇಳುವವರು ಕೇಳುವರು ಯಾರು ಇಲ್ಲವಾಗಿದೆ. ಚುನಾವಣೆಗಳಲ್ಲಿ ಮತಕ್ಕಾಗಿ ಮಾತ್ರ ಅಲ್ಪಸಂಖ್ಯಾತರು ಬೇಕಾ ಎಂದು ಪ್ರಶ್ನಿಸುತ್ತಾ ಸಭೆಯಿಂದ ಹೊರನಡೆದರು.
ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಭಿನ್ನಾಭಿಪ್ರಾಯ ತೊರೆದು ಪಕ್ಷದ ಗೆಲುವಿಗೆ ಶ್ರಮಿಸುವ ಅಗತ್ಯವಿದೆ ಎಂದರು.
ಸಭೆಯಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಲೋಕಸಭಾ ಅಭ್ಯರ್ಥಿ ಕೆ.ಗೌತಮ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷಿ÷್ಮನಾರಾಯಣ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಮುಖಂಡ ಸಲಾಲುದ್ದೀನ್ ಬಾಬು ಮತ್ತಿತರರಿದ್ದರು.