ನ್ಯೂಸ್

ವಕ್ಫ್ ವಿರುದ್ಧ ಮುಂದುವರಿದ ಹೋರಾಟ, ಜೆಪಿಸಿ ಸಮಿತಿಗೆ ಅಹವಾಲು ಸಲ್ಲಿಸಲು ರೈತರಿಗೆ ಸಚಿವೆ ಶೋಭಾ ಕರೆ

ವಿಜಯಪುರ: ಕೇಂದ್ರದ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಆಗಮಿಸುತ್ತಿದ್ದು, ರೈತರು, ಪುರಾತನ ಸ್ಮಾರಕಗಳು, ಮಠ-ಮಾನ್ಯಗಳ ಆಸ್ತಿಗಳನ್ನು ವಕ್ಫ್‌ಗೆ ಸೇರ್ಪಡೆ ಮಾಡಿರುವ ಬಗ್ಗೆ ಅಹವಾಲು ಸಲ್ಲಿಸಲಾಗುವುದೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಎದುರು ‘ವಕ್ಫ್ ಹಟಾವೋ-ದೇಶ ಬಚಾವೋ, ಮಾರಕ ವಕ್ಫ್ ಕಾಯ್ದೆ ನಿರ್ಮೂಲನೆ ನಮ್ಮೆಲ್ಲರ ಗುರಿ’ ಘೋಷವಾಕ್ಯದಡಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿಯ ಮೂರನೇ ದಿನವಾದ ಬುಧವಾರದಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರೃದ ಸಂದರ್ಭದಲ್ಲಿ ಕೇವಲ 1000 ಸಂಖ್ಯೆಯಲ್ಲಿದ್ದ ವಕ್ಫ್ ಆಸ್ತಿ ಇಂದು 9.50 ಲಕ್ಷಕ್ಕೂ ಅಧಿಕವಾಗಿದೆ. ವಕ್ಫ್ ಎಂಬುದೇ ಅಲ್ಲಾನಿಗೆ ದಾನ ಮಾಡುವಂಥದ್ದು. ಈ ದೇಶದಲ್ಲಿ ಎಷ್ಟು ಮುಸಲ್ಮಾನರು ಅಲ್ಲಾನ ಹೆಸರಿಗೆ ದಾನ ಮಾಡಿದ್ದಾರೆ? ಎಂದ ಶೋಭಾ, ದೇವರ ಹೆಸರಿನಲ್ಲಿದ್ದ ಭೂಮಿಯನ್ನು ಕಾಂಗ್ರೆಸ್ ಹಾಗೂ ಮುಸಲ್ಮಾನ ಮುಖಂಡರು ಒತ್ತುವರಿ ಮಾಡಿಕೊಂಡು ಲ್ಯಾಂಡ್ ಮಾಫಿಯಾ ಮಾಡುತ್ತಿದ್ದಾರೆ. ಹೊಸದಾಗಿ ಸಾವಿರಾರು ಎಕರೆ ಜಮೀನುಗಳಿಗೆ ನೋಟಿಸ್ ಕೊಟ್ಟು ಅದನ್ನೂ ವಕ್ಫ್‌ಗೆ ಮಾಡುತ್ತಿದ್ದಾರೆ. ದೇಶದಲ್ಲಿ ರಕ್ಷಣಾ ಇಲಾಖೆ, ರೈಲ್ವೆ ಇಲಾಖೆ ಬಿಟ್ಟರೆ ಅತ್ಯಂತ ಹೆಚ್ಚು ಜಮೀನು ಹೊಂದಿದ್ದ ಸಂಸ್ಥೆ ವಕ್ಫ್. ಇದಕ್ಕೆಲ್ಲ ಕಾಂಗ್ರೆಸ್‌ನ ಮುಸ್ಲಿಂ ತುಷ್ಠೀಕರಣ ನೀತಿಯೇ ಕಾರಣ ಎಂದರು.

ಆಶ್ಚರ್ಯಕರ ಸಂಗತಿ ಎಂದರೆ 1950 ರಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಮಂಡಿಸಿದ ಸಂವಿಧಾನದಲ್ಲಿ ವಕ್ಫ್ ಎಂಬ ಪದವೇ ಇರಲಿಲ್ಲ. ಅಂದಿನ ಪ್ರಧಾನಿ ಜವಹಾರಲಾಲ್ ನೆಹರು ಉದ್ದೇಶ ಪೂರ್ವಕವಾಗಿ 1954-55ರ ಸಂದರ್ಭದಲ್ಲಿ ವಕ್ಫ್ ಎಂಬ ಹೊಸ ವಿಚಾರ ದೇಶದ ಮುಂದೆ ಇಟ್ಟರು. ಕಾನೂನು ಕೂಡ ತಂದರು. 1995ರಲ್ಲಿ ಮತ್ತೆ ವಕ್ಫ್ ಕಾಯ್ದೆ ಜಾರಿ ಮಾಡಿ ವಿಶೇಷ ಅಧಿಕಾರ ಸಹ ನೀಡಲಾಯಿತು. ಸೆಕ್ಷನ್ 83-84ರ ಪ್ರಕಾರ ವಕ್ಫ್ ಟ್ರಿಬ್ಯುನಲ್ ಮಾಡಲಾಯಿತು. ಸೆಕ್ಷನ್ 85ರ ಪ್ರಕಾರ ಎಸಿ, ಡಿಸಿ, ಸಿವಿಲ್‌ಕೋರ್ಟ್, ಹೈಕೋರ್ಟ್ ಹಾಗೂಸುಪ್ರೀಂ ಕೋರ್ಟ್‌ಗೆ ಇರುವ ಕಂದಾಯ ಅಧಿಕಾರ ತೆಗೆದು ಹಾಕಲಾಯಿತು. ರೈತರು ಜಮೀನು ವ್ಯಾಜ್ಯಗಳಿಗೆ ಬಂದರೆ ಅವರು ಎಸಿ, ಡಿಸಿ ಅಥವಾ ಕೋರ್ಟ್‌ಗೆ ಹೋಗಂಗಿಲ್ಲ. ಅಲ್ಲಿ ಅವರಿಗೆ ನ್ಯಾಯ ಸಿಗಂಗಿಲ್ಲ. ಕಾರಣ ವಕ್ಫ್‌ಗೆ ಹೋಗಬೇಕು. ಆ ವಕ್ಫ್‌ನಲ್ಲಿ ಶೇ. 100 ರಷ್ಟು ಮುಸಲ್ಮಾನರಿದ್ದಾರೆ. ಅಲ್ಲಿ ನಮ್ಮ ರೈತರು ಕೈ ಕಟ್ಟಿ ನಿಂತರೆ ನ್ಯಾಯ ಕೊಡುವವರು ಯಾರು? ಎಂದರು.

ವಕ್ಫ್‌ಗೆ ಹೊಸ ಕಾಯ್ದೆ ತರಲು ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದಾಗ ಕಾಂಗ್ರೆಸ್ ಓಟ್‌ಬ್ಯಾಂಕ್‌ಗಾಗಿ ವಿರೋಧ ಮಾಡಿತು. ಬಳಿಕ ಕೇಂದ್ರ ಸರ್ಕಾರ ಜಗದಾಂಬಿಕಾ ಪಾಲ್ ಅಧ್ಯಕ್ಷತೆಯಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಿತು. ಅದಕ್ಕೂ ತಗಾದೆ ತೆಗೆಯಲಾಗುತ್ತಿದೆ. ಕಾಂಗ್ರೆಸ್‌ನ ತುಷ್ಠೀಕರಣದ ಫಲವಾಗಿ ಇಂದು ಸಾವಿರಾರು ಎಕರೆ ರೈತರ ಜಮೀನು ವಕ್ಫ್‌ಗೆ ಸೇರ್ಪಡೆಯಾಗುತ್ತಿದೆ. ಕರ್ನಾಟಕ ಹೊತ್ತಿ ಉರಿಯುತ್ತಿದ್ದೆ. ಲ್ಯಾಂಡ್ ಜಿಹಾದ್ ಸದ್ದು ಜೋರಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಸ್ಲಿಂರನ್ನು ತುಷ್ಠೀಕರಣ ಮಾಡಲಾಗುತ್ತಿದೆ. ರೈತರಿಗೆ ಬರೆ ಹಾಕಲಾಗುತ್ತಿದೆ. ಹೀಗಾಗಿ ನಮ್ಮ ನೋವು ಕೇಳಲು ಬರಬೇಕೆಂದು ಕೇಳಲಾಗಿ ಜೆಪಿಸಿ ಅಧ್ಯಕ್ಷ ಪಾಲ್ ಅವರು ಬರುತ್ತಿದ್ದಾರೆ. ಅವರಿಗೆ ಅಹವಾಲು ಸಲ್ಲಿಸಲಾಗುವುದು ಎಂದರು.

ಸಂಸದ ಗದ್ದಿಗೌಡರ ಮಾತನಾಡಿ, ವಕ್ಫ್ ವಿವಾದಕ್ಕೆ ಕಾರಣವಾಗಿರುವ ಸಚಿವ ಜಮೀರ್‌ಅಹ್ಮದ್ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಮಾಜಿ ಶಾಸಕ ವೀರಣ ಚರಂತಿಮಠ ಸೇರಿದಂತೆ ಹಲವು ಮುಖಂಡರಿದ್ದರು. ವಿವಿಧ ಸಮುದಾಯಗಳು, ಸಂಘ-ಸಂಸ್ಥೆಗಳು ಹಾಗೂ ಸಂಘಟನೆಗಳು ಧರಣಿಗೆ ಬೆಂಬಲ ಸೂಚಿಸಿದವು.