ಸಾಗರದಲ್ಲಿ ಏರ್ಪಡಿಸಿದ್ದ ವಸಂತ ವೇದ ಶಿಬಿರದ ಸಮರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಗಜಾನನ ಭಟ್ಟ, ಜಿ.ಎಂ.ಸುಬ್ರಹ್ಮಣ್ಯ, ಅನಂತ ಭಟ್, ಪ್ರೊ. ಗಣೇಶ್ ಟಿ. ಪಂಡಿತ್ ಇತರರಿದ್ದರು.  
ನ್ಯೂಸ್

ವೇದಾಭ್ಯಾಸ ಪರಂಪರೆ ಮುಂದುವರಿಸಿ

ಶಿವಕುಮಾರ ಎಸ್.ಪಿ.

ಸಾಗರ: ವೇದವಿದ್ಯೆಯನ್ನು ಕಲಿಯುವ ಮೂಲಕ ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಏಕೆಂದರೆ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವೇದವಿದ್ಯೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂಸ್ಕೃತ ಉಪನ್ಯಾಸಕ ವಿದ್ವಾನ್ ಗಜಾನನ ಭಟ್ಟ ರೇವಣಕಟ್ಟಾ ಹೇಳಿದರು.

ಸಾಗರದ ಕಾನ್ಲೆ ಛತ್ರದಲ್ಲಿ ಮಂಗಳವಾರ ಗೀರ್ವಾಣ ಭಾರತಿ ಟ್ರಸ್ಟ್ ಮತ್ತು ಶ್ರೀಧರ ಸೇವಾ ಮಹಾಮಂಡಲದಿಂದ ಏರ್ಪಡಿಸಿದ್ದ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಭಾರತೀಯ ವೇದ, ಉಪನಿಷತ್ತುಗಳು ಅತ್ಯಂತ ಶಕ್ತಿಶಾಲಿ. ಅವು ನಶಿಸಿಹೋಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಇತರೆ ವಿಷಯಗಳನ್ನು ಕಲಿಯುವ ಭರಾಟೆಯಲ್ಲಿ ವೇದಾಧ್ಯಯನವನ್ನು ಮಕ್ಕಳು ಮರೆಯಬಾರದು. ನಿರಂತರ ಕಲಿಕೆ, ಏಗಾಗ್ರತೆ ಇದ್ದರೆ ವೇದಾಧ್ಯಯನ ಕಷ್ಟವಲ್ಲ. ವಸಂತ ವೇದ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ವೇದಗಳನ್ನು ಪ್ರಸರಿಸುವ ಕೆಲಸ ಮಾಡಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಜಿ.ಎಂ.ಸುಬ್ರಹ್ಮಣ್ಯ ಮಾತನಾಡಿ, ವೇದ, ಉಪನಿಷತ್ತು, ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಗೀರ್ವಾಣ ಭಾರತೀ ಟ್ರಸ್ಟ್ ಮಾಡುತ್ತಿದೆ. ಶಿಬಿರದಲ್ಲಿ ಸುಮಾರು 50 ಮಕ್ಕಳು ಪಾಲ್ಗೊಂಡು ಅಭ್ಯಾಸ ಮಾಡಿದ್ದಾರೆ. ನೀವು ಕಲಿತಿದ್ದನ್ನು ಮುಂದುವರಿಸಿಕೊಂಡು ಹೋಗಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ವೇದಾಭ್ಯಾಸದಲ್ಲಿ ಶೇ. 99.36 ಅಂಕ ಪಡೆದ ನಾಗೇಂದ್ರ, ಹವ್ಯಕ ವೇದರತ್ನ ಪ್ರಶಸ್ತಿ ಪುರಸ್ಕೃತ ಅನಂತ ಭಟ್, ವಿದ್ವಾನ್ ಗಜಾನನ ಭಟ್, ಪ್ರೊ. ಗಣೇಶ್ ಟಿ. ಪಂಡಿತ್ ಅವರನ್ನು ಸನ್ಮಾನಿಸಲಾಯಿತು. ಎಂ.ಎ.ಗೌತಮ್, ಜಿ.ಎಂ.ಸುದರ್ಶನ, ವಿಜೇತ ಮಳಲಗದ್ದೆ, ಭಾರ್ಗವ ಬಾಪಟ್, ವಿಜೇತ ತಲಗೇರಿ, ಚಿದಂಬರ ಇತರರಿದ್ದರು.