ನ್ಯೂಸ್

ಚೀನಾ ಚಳಿ ಬಿಡಿಸಲು ಸಜ್ಜು; ಭಾರತ ಸೇನೆಯ ಗಸ್ತು ಮುಂದುವರಿಕೆ

ನವದೆಹಲಿ: ಪೂರ್ವ ಲಡಾಖ್​ನಲ್ಲಿ ಕಳೆದ ಐದು ತಿಂಗಳಿಂದ ಇರುವ ಉದ್ವಿಗ್ನತೆ ಚಳಿಗಾಲದಲ್ಲೂ ಮುಂದುವರಿಯುವ ಸಾಧ್ಯತೆ ಇರುವುದರಿಂದ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್​ಎಸಿ) ಆಯಕಟ್ಟಿನ ಸ್ಥಳಗಳಲ್ಲಿ ಭಾರತೀಯ ಸೇನೆ ಯುದ್ಧ ಟ್ಯಾಂಕ್ ಮತ್ತು ದುರ್ಗಮ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸು ವಂತಹ ನಿಪುಣ ಸೇನಾ ತುಕಡಿಯನ್ನು ಜಮಾವಣೆ ಮಾಡಿದೆ.

14,500 ಅಡಿ (ಸಮುದ್ರ ಮಟ್ಟದಿಂದ) ಎತ್ತರದ ಚುಮರ್-ದೆಮ್​ ಚೌಕ್​ನಲ್ಲಿ ಟಿ-90 ಟ್ಯಾಂಕ್, ಟಿ-72 ಟ್ಯಾಂಕ್, ಬಿಎಂಪಿ ವಾಹನಗಳನ್ನು ಇರಿಸಿದೆ. ಇವು ಮೈನಸ್ 40 ಡಿಗ್ರಿ ತಾಪಮಾನದಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಟ್ಯಾಂಕ್​ಗಳು, ಬಿಎಂಪಿ ವಾಹನಗಳು 14,700 ಅಡಿ (ಸಮುದ್ರ ಮಟ್ಟದಿಂದ) ಪ್ರದೇಶದಲ್ಲಿ ಎಲ್ಲ ರೀತಿಯ ಹವಾಗುಣದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಿವೆ ಎಂದು ಮೂಲಗಳು ಹೇಳಿವೆ. ಪೂರ್ವ ಲಡಾಖ್​ನಲ್ಲಿ 1,597 ಕಿ.ಮೀ. ಉದ್ದ ಎಲ್​ಎಸಿ ಇದ್ದು, ಇಲ್ಲಿ ಚಳಿಗಾಲದ ವೇಳೆ ರಾತ್ರಿಹೊತ್ತು ಮೈನಸ್ 35 ಡಿಗ್ರಿವರೆಗೂ ತಾಪಮಾನ ಇಳಿಯುತ್ತದೆ. ಗಡಿ ಬಿಕ್ಕಟ್ಟು ಕುರಿತಂತೆ ಭಾರತ ಮತ್ತು ಚೀನಾ ಮಧ್ಯೆ ಸೇನಾಧಿಕಾರಿಗಳು ಆರು ಸುತ್ತು ಸಭೆ ನಡೆಸಿದ್ದರೂ, ಮಾತುಕತೆಯಲ್ಲಿ ಒಪ್ಪಿದ ಅಂಶಗಳನ್ನು ಚೀನಾ ಪಾಲಿಸುತ್ತಿಲ್ಲ. ಗಡಿಯಿಂದ ಸೇನೆ ಹಿಂದಕ್ಕೆ ಕರೆಯಿಸಿಕೊಂಡಿಲ್ಲ. ಹೀಗಾಗಿ ಚೀನಾವನ್ನು ನಂಬುವಂತಿಲ್ಲ. ಆದ ಕಾರಣ ಚಳಿಗಾಲದಲ್ಲೂ ಗಡಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಲೋಹದ ಹಕ್ಕಿಯನ್ನೇ ಹಿಮ್ಮೆಟ್ಟಿಸಿದ ಪಕ್ಷಿ.. ಮುಂಬೈಗೆ ಮರಳಿದ ವಿಮಾನ, ಆಗಿದ್ದಾದರೂ ಏನು?

ಚೀನಾ ಕೂಡ ಸನ್ನದ್ಧ

ಚೀನಾ ಕೂಡ ಗಡಿಯಲ್ಲಿ ಹೆಚ್ಚಿನ ಸೇನೆ, ಯುದ್ಧೋಪಕರಣಗಳನ್ನು ಸೆಪ್ಟೆಂಬರ್ ಮೊದಲ ವಾರದಲ್ಲೇ ನಿಯೋಜಿಸಿದೆ. ಮೂಲಗಳ ಪ್ರಕಾರ, 50 ಸಾವಿರ ಯೋಧರನ್ನು ಜಮಾವಣೆ ಮಾಡಲಾಗಿದೆ. ಅತಿ ಎತ್ತರದ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಮರಾಭ್ಯಾಸವನ್ನೂ ನಡೆಸಿದೆ. ಎರಡು ವಾರದ ಹಿಂದೆ ಬಹುನಳಿಕೆಯ ರಾಕೆಟ್ ಉಡಾಹಕಗಳ ಪರೀಕ್ಷೆಯನ್ನು ನಡೆಸಿದೆ ಎಂದು ಚೀನಾದ ಗ್ಲೋಬಲ್ ಟೈಮ್್ಸ ವರದಿ ಮಾಡಿದೆ. ದಕ್ಷಿಣ ದೌಲತ್ ಬೇಗ್ ಓಲ್ಡಿ ಎದುರಿನ ತನ್ನ ಭಾಗದಲ್ಲಿ ಚೀನಾ ಸೇನೆ ಯಾಂತ್ರೀಕೃತ ಇನ್ಪೆಂಟ್ರಿ ನಿಯೋಜಿಸಿದೆ. ಟಿಬೆಟ್​ನ ಹಾಟನ್ ಏರ್​ಬೇಸ್​ಗೆ ಇದು ಸಮೀಪದಲ್ಲಿರುವ ಕಾರಣ ಚೀನಾ ಸೇನೆ ಇಲ್ಲಿ ಬಲವಾಗಿದೆ. ಆದರೂ ಭಾರತದ ದೆಪ್ಸಾಂಗ್​ನ ಗಸ್ತು ತಂಡ ಇಲ್ಲಿ ಕಟ್ಟೆಚ್ಚರ ವಹಿಸಿದೆ. ಇದನ್ನೂ ಓದಿ: ಕೆಲಸ ಕೊಡಿಸುವುದಾಗಿ ಕರೆಸಿ ರೈಲು ನಿಲ್ದಾಣದಲ್ಲಿಯೇ ಅಧಿಕಾರಿಗಳಿಂದ ಗ್ಯಾಂಗ್​ರೇಪ್​!

ಪ್ಯಾಂಗಾಂಗ್​ನಲ್ಲೂ ಕಟ್ಟೆಚ್ಚರ

ಪ್ಯಾಂಗಾಂಗ್ ತ್ಸೊ ಸರೋವರದ 5,800 ಮೀಟರ್ (ಸಮುದ್ರ ಮಟ್ಟದಿಂದ) ಎತ್ತರವಿರುವ ಫಿಂಗರ್ ಪಾಯಿಂಟ್ 4ರಲ್ಲೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಭಾರತದ ಸೇನೆ ಹೇಳಿದೆ. ಸರೋವರದ ಉತ್ತರ ದಂಡೆಯಲ್ಲಿ ಉಭಯ ದೇಶಗಳ ಸೈನಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಚೀನಾ ಪಡೆ ಫಿಂಗರ್ 6ರ ಗಸ್ತು ಪಾಯಿಂಟ್​ನಿಂದ ಹಿಂದೆ ಬೀಡುಬಿಟ್ಟಿದ್ದರೆ, ಭಾರತದ ಸೇನೆ ಫಿಂಗರ್ 3ರಲ್ಲಿ ಇದೆ. ದಕ್ಷಿಣ ದಂಡೆಯ ಕೈಲಾಶ್ ಪರ್ವತ ಶ್ರೇಣಿಯ ರೆಜಾಂಗ್ ಲಾ, ರೆಚಿನ್ ಲಾ ಪ್ರದೇಶಗಳು ಭಾರತ ಹಿಡಿತದಲ್ಲಿವೆ. ಆಯಕಟ್ಟಿನ ಬೆಟ್ಟಗಳಲ್ಲೂ ಭಾರತೀಯ ಸೇನೆ ಬೀಡುಬಿಟ್ಟಿರುವ ಕಾರಣ ಚೀನಾ ಪಡೆಯ ಚಲನವಲನ ಗುರುತಿಸಬಹುದಾಗಿದೆ.

ಗಡಿ ಬಿಕ್ಕಟ್ಟಿನ ಹಿನ್ನೋಟ...
  1. ಮೇ ಮೊದಲ ವಾರದಲ್ಲಿ ಪ್ಯಾಂಗಾಂಗ್ ತ್ಸೊ ಸರೋವರ ಮತ್ತು ಸಿಕ್ಕಿಂನ ನಾಕು ಲಾ ಗಡಿಯಲ್ಲಿ ಘರ್ಷಣೆ
  2. ಪೂರ್ವ ಲಡಾಖ್​ನಲ್ಲಿ ಸೇನೆ ಹೆಚ್ಚಿಸಿದ ಚೀನಾ. ಗೋಗ್ರಾ ಹಾಟ್​ಸ್ಪಿ›ಂಗ್ಸ್, ಗಲ್ವಾನ್ ಕಣಿವೆ. ದೆಪ್ಸಾಂಗ್, ಪ್ಯಾಂಗಾಂಗ್ ತ್ಸೊ ಸರೋವರದ ಫಿಂಗರ್ ಪಾಯಿಂಟ್​ಗಳಲ್ಲಿ ಮುಂದಡಿ ಇಟ್ಟ ಚೀನಾ ಸೇನೆ.
  3. ಜೂನ್ 15 ಗಲ್ವಾನ್ ಕಣಿವೆಯ 14ನೇ ಗಸ್ತುಪಾಯಿಂಟ್​ನಲ್ಲಿ ಉಭಯ ಸೇನೆಗಳ ಘರ್ಷಣೆ. ಭಾರತದ 20 ಯೋಧರು ಹುತಾತ್ಮ. ಉಭಯ ದೇಶಗಳ ಮಧ್ಯೆ ಬಿಗುವಿನ ವಾತಾವರಣ.
  4. ಆಗಸ್ಟ್ 29 ಮತ್ತು 31ರ ರಾತ್ರಿ ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯಲ್ಲಿ ದಿಣ್ಣೆಗಳನ್ನು ವಶಪಡಿಸಿಕೊಳ್ಳಲು ಮುನ್ನುಗ್ಗಿದ ಚೀನಾ ಸೇನೆಯನ್ನು ತಡೆದ ಭಾರತದ ಯೋಧರು.
  5. ಪ್ಯಾಂಗಾಂಗ್ ಸರೋವರದ ಕೆಲವು ಭಾಗದಲ್ಲಿ ಗುಂಡಿನ ಮೊರೆತ.
ಫೈರ್  ಆ್ಯಂಡ್ ಫ್ಯೂರಿ ದಳವನ್ನು ಹೊಂದಿರುವ ವಿಶ್ವದ ಏಕೈಕ ಮಿಲಿಟರಿ ಭಾರತೀಯ ಸೇನೆಯಾ ಗಿದೆ. ಚಳಿಗಾಲದಲ್ಲಿ ಅತಿ ಎತ್ತರದ ದುರ್ಗಮ ಶಿಖರಗಳಲ್ಲಿ ಯುದ್ಧ ವಾಹನ, ಸಾಮಗ್ರಿಗಳ ಜತೆಗೆ ಈ ದಳವನ್ನು ನಿಯೋಜಿಸಿರುವ ಸೇನೆಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಡಿಮೆ ತಾಪಮಾನದಲ್ಲಿ ಸೈನಿಕರು, ಯುದ್ಧ ವಾಹನ ಮತ್ತು ಸಲಕರಣೆಗಳನ್ನು ನಿರ್ವಹಣೆ ಮಾಡುವುದು ದೊಡ್ಡ ಸವಾಲಾಗಿದ್ದರೂ ನಾವು ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದ್ದೇವೆ. | ಮೇಜರ್ ಜನರಲ್ ಅರವಿಂದ ಕಪೂರ್ 14ನೇ ಕೋಡ್​ನ ಮುಖ್ಯಸ್ಥ
ಅಗತ್ಯ ಸಲಕರಣೆ ಸಂಗ್ರಹ

ಮರಗಟ್ಟುವ ಚಳಿಯಲ್ಲಿ ಬದುಕುವುದೇ ದುಸ್ತರವಾಗಿರುವಾಗ ಯೋಧರು ಗಡಿಯನ್ನು ಕಟ್ಟೆಚ್ಚರದಿಂದ ಕಾಯಬೇಕಿದೆ. ಹೀಗಾಗಿ ಮುಂಚೂಣಿ ಚೌಕಿಯಲ್ಲಿರುವ ಸೇನೆಗೆ ಬೇಕಾದ ಅಗತ್ಯ ಪೌಷ್ಟಿಕ ಆಹಾರ ಪದಾರ್ಥ ಗಳು, ಖಾದ್ಯ ತೈಲ, ವಾಹನ, ಇಂಧನ, ಸಂವಹನ ಸಾಧನ, ಆಯುಧ, ಶಸ್ತ್ರಾಸ್ತ್ರದ ಜತೆಗೆ ಬೆಚ್ಚಗಿರಿಸುವ ವಿಶೇಷ ಉಡುಪು, ಟೆಂಟ್​ಗಳು, ಸ್ಲೀಪಿಂಗ್ ಬ್ಯಾಗ್​ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇನೆ ಸಂಗ್ರಹಿಸಿದೆ. ಸೈನಿಕರನ್ನು ಶೀತ ಮಾರುತ ಮತ್ತು ಹಿಮಮಳೆಯಿಂದ ರಕ್ಷಿಸಲು ಕಂಟೈನರ್​ಗಳು, ಬ್ಯಾರಲ್ ಶಲ್ಟರ್​ಗಳು, ಗಡಿ ಚೌಕಿಗಳಲ್ಲಿ ಹೀಟರ್​ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಸೇನಾ ಶಿಬಿರಗಳಲ್ಲಿ ಟಿವಿ ವ್ಯವಸ್ಥೆಯೂ ಇದೆ. ತುಕಡಿಯನ್ನು ಲವಲವಿಕೆ ಯಿಂದ ಇರಿಸಲು, ಅತಿ ಎತ್ತರದ ಸ್ಥಳಗಳಲ್ಲೂ ತರಬೇತಿ, ಕವಾಯತುಗಳನ್ನು ನಡೆಸಲಾಗುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.