ಸಾಗರ: ಮೂರು ತಿಂಗಳಿನೊಳಗೆ ಚುನಾವಣೆ ನಡೆಸಿ ಹೊಸ ಸಮಿತಿ ರಚನೆ ಮಾಡಿ ನ್ಯಾಯಾಲಯಕ್ಕೆ ಪಟ್ಟಿ ನೀಡುವಂತೆ ನ್ಯಾಯಾಲಯ ನೀಡಿದ ಆದೇಶವನ್ನು ಮಾರಿಕಾಂಬಾ ಸಮಿತಿ ಗಾಳಿಗೆ ತೂರಿ, ನ್ಯಾಯಾಂಗ ನಿಂದನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಮಿತಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ ಎಂದು ಮಾರಿಕಾಂಬಾ ಹಿತರಕ್ಷಣಾ ಸಮಿತಿ ಸಂಚಾಲಕ ಎಂ.ಡಿ.ಆನಂದ್ ಮಾಹಿತಿ ನೀಡಿದರು.
ಸಮಿತಿಯು ನ್ಯಾಯಾಲಯದ ಆದೇಶಕ್ಕೆ ಮನ್ನಣೆ ನೀಡದೆ 94 ದಿನ ಕಳೆದರೂ ಚುನಾವಣೆ ನಡೆಸಿಲ್ಲ. ನ್ಯಾಯಾಲಯವು ಜು.11ರಿಂದ ಅ.11ರೊಳಗೆ ಚುನಾವಣೆ ನಡೆಸಲು ಅವಕಾಶ ನೀಡಿತ್ತು. ಆದರೆ ಹೊಸ ಸಮಿತಿ ರಚನೆಗೆ ಚುನಾವಣೆ ಪ್ರಕ್ರಿಯೆ ಆರಂಭಿಸಿಲ್ಲ. ತಾವೇ ಅಧಿಕಾರದಲ್ಲಿ ಮುಂದುವರಿಯಲು ಸಮಿತಿ ಸಂಚು ರೂಪಿಸಿದಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಹಿತರಕ್ಷಣಾ ಸಮಿತಿಯಿಂದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ 32 ಸದಸ್ಯರ ವಿರುದ್ಧ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅ.14ರಂದು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ಅ.31ರಂದು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚುನಾವಣೆ ನಡೆಯುವವರೆಗೂ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಿಸಬೇಕು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಲೀ, ಜಿಲ್ಲಾಧಿಕಾರಿಗಳಾಗಲೀ ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಅವರ ಮೂಲಕ ಚುನಾವಣೆ ನಂತರ ಬರುವ ಹೊಸ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ. ಎರಡೂ ಅರ್ಜಿಗಳಿಗೂ ಉಳಿದ ಎಲ್ಲ ಪ್ರತಿವಾದಿಗಳು ಸಮ್ಮತಿ ಸೂಚಿಸಿದ್ದಾರೆ. ದೇವಸ್ಥಾನ ಸಮಿತಿಯವರು 12 ವರ್ಷವಾದರೂ ಅಧಿಕಾರ ಬಿಟ್ಟು ಕೆಳಗಿಳಿಯುತ್ತಿಲ್ಲ. ಇದು ಬೈಲಾ ಮತ್ತು ನ್ಯಾಯಕ್ಕೆ ವಿರುದ್ಧವಾದುದು ಎಂದು ಹೇಳಿದರು.
ನಿತ್ಯಾನಂದ ಶೆಟ್ಟಿ, ಟಿ.ರಾಮಪ್ಪ, ಜನಾರ್ದನ ಆಚಾರಿ, ಗುರುಬಸವನ ಗೌಡ, ಪದ್ಮನಾಭ, ಮಂಜುನಾಥ, ಭೈರಪ್ಪ, ರಾಜೇಂದ್ರ ಸಿಂಗ್, ಮಂಜಪ್ಪ, ಪ್ರಜ್ವಲ್, ಸದಾನಂದ ಇತರರಿದ್ದರು.