ಅಶ್ವಿನಿ ಎಚ್.ಆರ್, ಬೆಂಗಳೂರು
ಮೆಲ್ಲಗೆ ಬಿಸಿಲಿನ ಧಗೆ ಎಲ್ಲರಿಗೂ ತಾಗತೊಡಗಿದೆ. ಈಗೆಲ್ಲರ ಗಮನ ತಂಪು ಆಹಾರಗಳ ಕಡೆ. ವಿಶೇಷವಾಗಿ ಇಂತಹ ಸಮಯದಲ್ಲಿ ಬಹುತೇಕರಿಗೆ ನೆನಪಾಗುವ ಮೊದಲನೆಯ ಪದಾರ್ಥ ಮೊಸರು. ಚಳಿ ಎಂದು ದೂರವಿಟ್ಟಿದ್ದ ಮೊಸರನ್ನು ಈಗೆಲ್ಲರೂ ಸೇವಿಸುವ ಸಮಯ. ಮೊಸರು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಹಲ್ಲು ಮತ್ತು ಮೂಳೆಗಳು ಗಟ್ಟಿಯಾಗುತ್ತವೆ. ಜತೆಗೆ ಮೊಸರು ಸೇವಿಸುವುರಿಂದ ತ್ವಚೆ ಮತ್ತು ಕೂದಲಿಗೂ ಏಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ...
ಸುಕ್ಕು ತಡೆಯಲು:
ಮೊಸರಿನ ಮೂಲಕ ಸುಕ್ಕು ಎದುರಿಸಬಹುದು. 2 ಟೇಬಲ್ ಸ್ಪೂನ್ ಮೊಸರಿಗೆ, 1 ಚಮಚ ಓಟ್ಸ್ ಸೇರಿಸಿ. ಓಟ್ಸ್ ಮೆತ್ತಗಾದ ನಂತರ ಮುಖ ಮತ್ತು ಕತ್ತಿನ ಭಾಗಗಳಿಗೆ ಹಚ್ಚಿ. ವೃತ್ತಾಕಾರವಾಗಿ ಮಸಾಜ್ ಮಾಡಿ. 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.
ಕೂದಲು ಉದುರುವಿಕೆ ನಿಲ್ಲಿಸಲು:
ಕೂದಲು ಉದುರುವಿಕೆ ಹಲವಾರು ಕಾರಣಗಳಿಗಾಗಿ ಸಂಭವಿಸುತ್ತದೆ. ಆದರೆ ಮೊಸರನ್ನು ಬಳಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಅರ್ಧ ಕಪ್ ಮೊಸರು ಹಾಗೂ 3 ಟೇಬಲ್ ಸ್ಪೂನ್ ನೆನಸಿದ ಮೆಂತ್ಯ ಬೀಜ ಒಟ್ಟಿಗೆ ಸೇರಿಸಿ ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಟ್ಟು ನೈಸರ್ಗಿಕ ಶಾಂಪೂ ಬಳಸಿ ತೊಳೆಯಿರಿ.
ಪ್ರತಿ ನಿತ್ಯ ಸೇವಿಸಬಹುದಾ?:
ಪ್ರತಿನಿತ್ಯ 3 ಕಪ್ ಕೊಬ್ಬಿಲ್ಲದ ಅಥವಾ ಕಡಿಮೆ ಕೊಬ್ಬಿನ ಮೊಸರನ್ನು ಸೇವಿಸುವುದು ಆರೋಗ್ಯಕರ ಮತ್ತು ಸುರಕ್ಷಿತ. ನಂಬಲಾಗದಷ್ಟು ಪೌಷ್ಟಿಕಾಂಶ ಹೊಂದಿರುವ ಮೊಸರು ಸೇವಿಸುವುದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವುದರ ಜತೆಗೆ ತೂಕ ನಿರ್ವಹಣೆಯಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.
ತಲೆಹೊಟ್ಟಿಗೆ ಪರಿಹಾರ
ಈಗಂತೂ ತಲೆಹೊಟ್ಟು ಸಾಮಾನ್ಯ ಸಮಸ್ಯೆಯಾಗಿದೆ, ಆದರೆ ಮೊಸರು ಬಳಸುವುದರಿಂದ ಇದನ್ನು ತಪ್ಪಿಸಬಹುದು. ಮೊಸರು ನೈಸರ್ಗಿಕ ಆಂಟಿಫಂಗಲ್. ಹಾಗಾಗಿ ಅರ್ಧ ಕಪ್ ಮೊಸರು ತೆಗೆದುಕೊಂಡು ನೆತ್ತಿಗೆ ಮಸಾಜ್ ಮಾಡಿ. ನಂತರ 20 ನಿಮಿಷಗಳ ಕಾಲ ಬಿಡಿ. ಗುಣಮಟ್ಟದ ಶಾಂಪೂ ಬಳಸಿ ತೊಳೆಯಿರಿ.
ಮೊಡವೆಗಳನ್ನು ತಡೆಗಟ್ಟಲು
ಮೊಡವೆಗಳ ವಿರುದ್ಧ ಹೋರಾಡಲು ಮೊಸರು ಪರಿಣಾಮಕಾರಿ ಮನೆಮದ್ದು ಎಂದು ಹೇಳುತ್ತಾರೆ ತಜ್ಞರು. ಹಾಗಾಗಿ ಒಂದು ಟೇಬಲ್ ಸ್ಪೂನ್ ಮೊಸರನ್ನು ತೆಗೆದುಕೊಂಡು, ಹತ್ತಿಯನ್ನು ಅದರಲ್ಲಿ ಅದ್ದಿ, ಸಮಸ್ಯೆಯಿರುವ ಜಾಗಕ್ಕೆ ಹಚ್ಚಿ. ಹೀಗೆ ಹಚ್ಚುವಾಗ ಹತ್ತಿ ಬದಲಾಯಿಸುತ್ತಿರಬೇಕು. ಇಲ್ಲದಿದ್ದಲ್ಲಿ ಮತ್ತೊಂದು ಜಾಗದಲ್ಲಿ ನಿಮ್ಮ ಮೊಡವೆ ಹರಡಲು ಕಾರಣವಾಗಬಹುದು. ಹೀಗೆ ರಾತ್ರಿಯಿಡೀ ಬಿಟ್ಟು, ಬೆಳಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ.