ಶಿವಮೊಗ್ಗದ ಕೋರ್ಟ್ ಕಟ್ಟಡ 
ನ್ಯೂಸ್

ಪರಿಹಾರ ನೀಡುವಂತೆ ಗ್ರಾಹಕರ ಆಯೋಗ ಆದೇಶ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಖಾಸಗಿ ವಿಮೆ ಕಂಪನಿಯ ಸೇವಾ ನ್ಯೂನತೆ ವಿರುದ್ಧ ಎಸ್.ಪ್ರೇಮಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.

ಎಸ್.ಪ್ರೇಮಾ ಎಂಬುವವರ ಪತಿಯು ವಿಮಾ ಪಾಲಿಸಿ ಪಡೆದಿದ್ದರು. ವಾರ್ಷಿಕ 12,752 ರೂ. ಕಂತು ಪಾವತಿಸಿದ್ದರು. 2021ರ ಜುಲೈನಲ್ಲಿ ಪ್ರೇಮಾ ಪತಿ ಹೃದಯಾಘಾತದಿಂದ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಸಿಗೆ ಅನುಗುಣವಾಗಿ ವಿಮಾ ಮೊತ್ತ ನೀಡುವಂತೆ ವಿಮಾ ಕಂಪನಿಯನ್ನು ಕೋರಿದ್ದರು.
ಈ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಕಂಪನಿ ಅರ್ಜಿದಾರರು ನಮ್ಮ ಕಂಪನಿ ವಿಮೆ ಪಡೆಯುವ ಮುನ್ನ ಬೇರೆ ಕಂಪನಿಗಳ ವಿಮೆ ಹೊಂದಿದ್ದರು. ಆದರೆ ಆ ಸಂಗತಿ ಮರೆಮಾಚಿದ್ದು, ಇದು ವಿಮಾ ಕಂಪನಿ ಮಾರ್ಗಸೂಚಿಗೆ ವಿರುದ್ಧವಾಗಿದೆ. ನಮ್ಮ ನಿಬಂಧನೆಗಳ ಉಲ್ಲಂಘನೆಯಾಗಿದೆ. ಹೀಗಾಗಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಎಸ್.ಪ್ರೇಮಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಮೊರೆ ಹೋಗಿದ್ದರು. ಅರ್ಜಿದಾರರ ಪಾಲಿಸಿಗೆ ಅನುಗುಣವಾಗಿ 24 ಲಕ್ಷ ರೂ. ಪಾಲಿಸಿ ಮೊತ್ತ ನೀಡಬೇಕು. ಸೇವಾ ನ್ಯೂನತೆ ಹಾಗೂ ಅರ್ಜಿದಾರರಿಗೆ ಉಂಟಾದ ಮಾನಸಿಕ ಹಿಂಸೆಗೆಂದು 15 ಸಾವಿರ ರೂ. ಹಾಗೂ ಕೋರ್ಟ್ ವ್ಯಾಜ್ಯದ ಬಾಬ್ತು 10 ಸಾವಿರ ರೂ. ನೀಡುವಂತೆ ವಿಮಾ ಕಂಪನಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ. ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಅವರನ್ನು ಒಳಗೊಂಡ ಪೀಠವು ಆದೇಶಿಸಿದೆ.