ನ್ಯೂಸ್

ನಗರದಾದ್ಯಂತ ನೂರಾಕ್ಕೂ ಹೆಚ್ಚು ಚೆಕ್‌ಪೋಸ್ಟ್ ನಿರ್ಮಾಣ

ಬೆಂಗಳೂರು: ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮೂರು ಚೆಕ್‌ಪೋಸ್ಟ್‌ಗಳಂತೆ ನಗರದಾದ್ಯಂತ ಅಂದಾಜು ನೂರಾಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚೆಕ್‌ಪೋಸ್ಟ್‌ಗಳು ದಿನದ ೨೪ ಗಂಟೆಗಳಲ್ಲೂ ಕಾರ್ಯನಿರ್ವಹಿಸುತ್ತವೆ. ಪಾಳಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಹೇಳಿದರು.
ಈ ಚೆಕ್‌ಪೋಸ್ಟ್‌ಗಳಲ್ಲಿ ನಮ್ಮ ಪೊಲೀಸರು, ಬಿಬಿಎಂಪಿ, ಆರ್‌ಟಿಒ, ಅಬಕಾರಿ, ವಾಣಿಜ್ಯ ತೆರಿಗೆ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇರುತ್ತಾರೆ. ರಸ್ತೆಗಳಲ್ಲಿ ಬರುವ ಪ್ರತಿಯೊಂದು ವಾಹನವನ್ನು ಈ ಸಿಬ್ಬಂದಿ ಸೂಕ್ಷ್ಮವಾಗಿ ಪರಿಶೀಲನೆ ಮಾಡಲಿದ್ದಾರೆ.
ಒಂದು ವೇಳೆ ಹಣ, ಮದ್ಯ, ದಾಖಲೆ ಇಲ್ಲದ ವಸ್ತುಗಳು ಕಂಡುಬಂದರೆ ತಕ್ಷಣ ಅವುಗಳನ್ನು ಜಪ್ತಿಮಾಡಿಕೊಳ್ಳುತ್ತಾರೆ. ಸೂಕ್ತ ದಾಖಲೆಗಳನ್ನು ಕೊಟ್ಟರೆ ವಶಪಡಿಸಿಕೊಂಡಿರುವ ಹಣ ಹಾಗೂ ಇನ್ನಿತರೆ ವಸ್ತುಗಳನ್ನು ಬಿಡುಗಡೆ ಮಾಡುತ್ತಾರೆ ಎಂದು ಹೇಳಿದರು.