ಮದ್ದೂರು ತಾಲೂಕಿನ ಕದಲೂರು ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿ ದೊಡ್ಡಿ ಗ್ರಾಮದ ಹೊರವಲಯದಲ್ಲಿ ಕಸ ವಿಲೇವಾರಿ ವಿಂಗಡಣಾ ಘಟಕದ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ನೆರವೇರಿಸಿದರು. ಕೆ.ಟಿ.ತಿಮ್ಮೇಗೌಡ, ಶಾಂತಮ್ಮ, ಶಿವಣ್ಣ, ಸುನಿಲ್, ರವಿಕುಮಾರ್ ಇದ್ದರು. 
ನ್ಯೂಸ್

ಪ್ರತೀ ಗ್ರಾಪಂಗಳಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ

ಮದ್ದೂರು : ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ಗ್ರಾಮಗಳ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವ ಜತೆಗೆ ಸರ್ಕಾರದ ನಿಯಮಾವಳಿ ಪ್ರಕಾರ ಘಟಕಗಳನ್ನು ನಿರ್ಮಾಣ ಮಾಡುತ್ತಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಕದಲೂರು ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿ ದೊಡ್ಡಿ ಗ್ರಾಮದ ಹೊರವಲಯದಲ್ಲಿ 2 ಕೋಟಿ ರೂ. ವೆಚ್ಚದ ಕಸ ವಿಲೇವಾರಿ ವಿಂಗಡಣಾ ಘಟಕದ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹಲವು ದಿನಗಳ ಹಿಂದೆ ಘನತ್ಯಾಜ್ಯ ಘಟಕವನ್ನು ತಾಲೂಕಿನ ಗೊರವನಹಳ್ಳಿ ಗ್ರಾಮದ ಹೊರ ವಲಯದಲ್ಲಿ ನಿರ್ಮಾಣ ಮಾಡಲು ಇಲಾಖೆ ಮುಂದಾಗಿತ್ತು. ಆದರೆ ಕೆಲ ತಾಂತ್ರಿಕ ಕಾರಣದಿಂದ ಈ ಘಟಕವನ್ನು ಕದಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 2 ಎಕರೆ ವ್ಯಾಪ್ತಿಯ ಜಮೀನಿನಲ್ಲಿ ಘಟಕದ ಕಟ್ಟಡ ನಿರ್ಮಾಣ ಮಾಡಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಘನತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿ ಅದನ್ನು ವಿಂಗಡಿಸುವ ಉದ್ದೇಶದಿಂದ ಈ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಘಟಕ ನಿರ್ಮಾಣದಿಂದಾಗಿ ಪ್ರತಿಯೊಂದು ಪಂಚಾಯಿತಿಗೆ ಅನುಕೂಲವಾಗಲಿದ್ದು, ಜತೆಗೆ ಶುಚಿತ್ವ ಮತ್ತು ಎಲ್ಲೆಂದರಲ್ಲಿ ಶೇಖರಣೆ ಮಾಡುವ ಘನತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಅನುಕೂಲವಾಗಲಿದೆ. ಸ್ಥಳೀಯರು ಇದರ ಸದುಪಯೋಗಕ್ಕೆ ಮುಂದಾಗಬೇಕು. ಗ್ರಾಮಗಳ ಸ್ವಚ್ಛತೆಗೆ ಹೆಚ್ಚು ಅವಕಾಶ ನೀಡಬೇಕು. ಇದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಗ್ರಾಮಾಭಿವೃದ್ಧಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಈಗಾಗಲೇ ಹಲವು ಯೋಜನೆಗಳನ್ನು ಸರ್ಕಾರ ಯೋಜನೆ ರೂಪಿಸಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಸಚಿವರೊಟ್ಟಿಗೆ ಚರ್ಚಿಸಿದ್ದು ಹಂತ ಹಂತವಾಗಿ ಗ್ರಾಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದೆಂದರು.

ಗೆಲುವು ಶತಸಿದ್ದ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ಶತಸಿದ್ಧ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಫಲಿತಾಂಶ ಹೊರಬೀಳುವ ಮುನ್ನವೇ ಹಲವು ಮಾತುಕತೆಗಳು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ಈಗಾಗಲೇ ಜನರ ಅಭಿಪ್ರಾಯ ಮತದಾರರ ಆಯ್ಕೆ ಮತ ಪಟ್ಟಿಯಲ್ಲಿದ್ದು ಇದರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯೋಗೇಶ್ವರ್ ಗೆಲುವು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಂಪಂ ಅಧ್ಯಕ್ಷ ಕೆ.ಟಿ.ತಿಮ್ಮೇಗೌಡ, ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಶಿವಣ್ಣ, ಸುನಿಲ್, ತಿಮ್ಮೇಗೌಡ, ಮುಖಂಡರಾದ ರವಿಕುಮಾರ್, ಭೈರವ, ಲೋಕೇಶ್, ಮೋಹನ್, ಶಿವಣ್ಣ , ಮರಿಯಪ್ಪ, ಶಿವರಾಜ್, ಪಿಡಿಒ ಶೀಲಾ ಇದ್ದರು.