ನವದೆಹಲಿ: ಮಸೂದೆಗಳನ್ನು ಅಂಗೀಕರಿಸಲು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕಾಲಮಿತಿ ವಿಧಿಸುವುದರಿಂದ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಲಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ 10 ಮಸೂದೆಗಳಿಗೆ ಅಂಗೀಕಾರ ನೀಡದೆ ವಿಳಂಬ ಮಾಡಿ, ಅವುಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಿದ ಕ್ರಮವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾ. ಆರ್. ಮಹಾದೇವನ್ ಅವರಿದ್ದ ಪೀಠ ಮಸೂದೆ ಅಂಗೀಕಾರಕ್ಕೆ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಗಡುವು ವಿಧಿಸಿ ತೀರ್ಪು ನೀಡಿತ್ತು.
ಈ ಸಂಬಂಧ ಕೇಂದ್ರ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್ಗೆ ಹೇಳಿಕೆಯನ್ನು ಸಲ್ಲಿಸಿದ್ದು ‘ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಗಡುವು ವಿಧಿಸುವುದು ಸರ್ಕಾರಕ್ಕೆ ನೀಡಿರುವ ಅಧಿಕಾರಗಳನ್ನು ಕಸಿದುಕೊಳ್ಳುವುದಕ್ಕೆ ಸಮನಾಗಿರುತ್ತದೆ. ಇದು ಅಧಿಕಾರಗಳ ಸೂಕ್ಷ್ಮ ಪ್ರತ್ಯೇಕತೆಯನ್ನು ಅಡ್ಡಿಪಡಿಸುತ್ತದೆ. ಇದು ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ನೀಡಲಾಗಿರುವ ಅಸಾಧಾರಣ ಅಧಿಕಾರದಲ್ಲಿಯೂ ಸಹ ಸುಪ್ರೀಂ ಕೋರ್ಟ್ ಸಂವಿಧಾನವನ್ನು ತಿದ್ದುಪಡಿ ಮಾಡಲು ಅಥವಾ ಸಂವಿಧಾನ ರಚನೆಕಾರರ ಉದ್ದೇಶವನ್ನು ಸೋಲಿಸಲು ಸಾಧ್ಯವಿಲ್ಲ. ರಾಜ್ಯಪಾಲರಂತಹ ಉನ್ನತ ಹುದ್ದೆಯನ್ನು ಅಧೀನ ಹುದ್ದೆಗೆ ಇಳಿಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ರಾಷ್ಟ್ರಪತಿ ಮತ್ತು ರಾಜ್ಯಪಾಲರ ಕಚೇರಿಗಳು ರಾಜಕೀಯವಾಗಿ ಸಂಪೂರ್ಣ ಮತ್ತು ಪ್ರಜಾಪ್ರಭುತ್ವ ಆಡಳಿತದ ಉನ್ನತ ಆದರ್ಶಗಳನ್ನು ಪ್ರತಿನಿಧಿಸುತ್ತವೆ. ಇದರಲ್ಲಿ ಯಾವುದೇ ಲೋಪಗಳಿದ್ದಲ್ಲಿ ನ್ಯಾಯಾಂಗ ಹಸ್ತಕ್ಷೇಪದ ಮೂಲಕವಲ್ಲ, ರಾಜಕೀಯ ಮತ್ತು ಸಾಂವಿಧಾನಿಕ ಕಾರ್ಯವಿಧಾನಗಳ ಮೂಲಕ ಸರಿಪಡಿಸಬೇಕು’ ಎಂದು ತಿಳಿಸಿದ್ದಾರೆ.
ರಾಜ್ಯಪಾಲರನ್ನು ಅನ್ಯಗ್ರಹ ಜೀವಿಗಳು ಅಥವಾ ವಿದೇಶಿಗರು ಎಂದು ಪರಿಗಣಿಸಬಾರದು. ರಾಜ್ಯಪಾಲರು ಕೇವಲ ರಾಜ್ಯದ ರಾಯಭಾರಿಗಳಲ್ಲ, ಅವರು ಪರೋಕ್ಷ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯದ ಮೂಲಕ ಪ್ರಜಾಸತ್ತಾತ್ಮಕ ಕಾನೂನುಬದ್ಧತೆಯನ್ನು ಹೊಂದಿದ್ದಾರೆ ಎಂದು ಮೆಹ್ತಾ ತಿಳಿಸಿದ್ದಾರೆ. ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ ಏಪ್ರಿಲ್ 12 ರಂದು ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ ಮಸೂದೆಗಳನ್ನು ಅಂಗೀಕರಿಸಲು ರಾಷ್ಟ್ರಪತಿಗಳಿಗೆ ಮೂರು ತಿಂಗಳು ಮತ್ತು ರಾಜ್ಯಪಾಲರಿಗೆ ಒಂದು ತಿಂಗಳ ಗಡುವು ವಿಧಿಸಿತ್ತು.