ನ್ಯೂಸ್

ಕಾಂಗ್ರೆಸ್‌ನಿಂದ ಗ್ರಾಮ ಮಟ್ಟದಲ್ಲಿ ಸಂವಿಧಾನ ರಕ್ಷಕ್ ನೇಮಕ

ಬೆಂಗಳೂರು: ಜೈ ಭೀಮ್, ಜೈ ಸಂವಿಧಾನ ಈ ಎರಡು ಘೋಷಣೆಗಳು ದೇಶದಲ್ಲಿ ಹೊಸ ಕ್ರಾಂತಿ, ಹೊಸ ಹುರುಪನ್ನು ಮೂಡಿಸಿವೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ದಲಿತ, ಆದಿವಾಸಿ, ಅಲ್ಪಸಂಖ್ಯಾತರ ಸಂಘಟನೆ ಮಾಡುತ್ತೇವೆ ಎಂದು ಎಐಸಿಸಿ ಎಸ್ಸಿ ವಿಭಾಗದ ಅಧ್ಯಕ್ಷ ರಾಜೇಶ್ ಲಿಲೋಥಿಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನ ರಕ್ಷಕ’ ಕಾರ್ಯಕ್ರಮವನ್ನು ಕರ್ನಾಟಕದ 3 ಸಾವಿರ ಗ್ರಾಮಗಳಲ್ಲಿ ಅಭಿಯಾನ ನಡೆಸಲಾಗುವುದು. ಒಬ್ಬರು ಮಹಿಳೆ ಮತ್ತು ಒಬ್ಬ ಪುರುಷನನ್ನು ‘ಸಂವಿಧಾನ ರಕ್ಷಕ್’ ಎಂದು ಗುರುತಿಸಲಾಗುವುದು ಹಾಗೆಯೇ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತದೆ ಎಂದು ವಿವರಿಸಿದರು.
ಸಂವಿಧಾನ ಮತ್ತು ಅಂಬೇಡ್ಕರ್ ಹೆಸರು ಹೇಳಿದರೆ ಆರ್‌ಎಸ್‌ಎಸ್ ಭಯಪಡುತ್ತದೆ. 400 ಸ್ಥಾನಗಳು ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ, ಮನುಸ್ಮೃತಿಯನ್ನು ಆಚರಣೆಗೆ ತರುತ್ತೇವೆ ಎಂದು ಘಂಟಾಘೋಷವಾಗಿ ಬಿಜೆಪಿಯವರು ಹೇಳುತ್ತಿದ್ದರು. ಆದರೆ ನಮ್ಮ ದೇಶದ ಜನ ಬಿಜೆಪಿಯವರ ಕುತಂತ್ರಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಅವರಿಗೆ ಸಾಷ್ಟಾಂಗ ಧನ್ಯವಾದಗಳನ್ನು ತಿಳಿಸಬೇಕು ಎಂದರು.
ದಲಿತರ, ಆದಿವಾಸಿಗಳ, ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯಲು ನರೇಂದ್ರ ಮೋದಿ ಅವರು ಕತ್ತಿ ಹಿಡಿದು ನಿಂತಿದ್ದರು. ಈಗ ಕತ್ತಿ ಕೆಳಗೆ ಬಿದ್ದಿದೆ. ಈಗ ಅಲುಗಾಡುವ ಖುರ್ಚಿ ಮೇಲೆ ಕುಳಿತಿದ್ದಾರೆ ಎಂದು ಲೇವಡಿ ಮಾಡಿದರು.
ಎಐಸಿಸಿ ಎಸ್‌ಸಿಎಸ್‌ಟಿ, ಅಲ್ಪಸಂಖ್ಯಾತ ವಿಭಾಗದ ಸಂಯೋಜಕ ಕೆ.ರಾಜು ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರಲ್ಲಿ ನಾಯಕತ್ವ ಗುಣ ಬೆಳೆಸಲು ಪಕ್ಷದಿಂದ ಲೀಡರ್‌ಶಿಪ್ ಡೆವಲಪ್‌ಮೆಂಟ್ ಮಿಷನ್ ಕಾರ್ಯಕ್ರಮವನ್ನು 8 ರಾಜ್ಯಗಳ 184 ಕ್ಷೇತ್ರಗಳಲ್ಲಿ ಮುಂದಿನ 20 ತಿಂಗಳಲ್ಲಿ ಆಯೋಜಿಸಲಾಗುತ್ತದೆ ಎಂದರು.
ಸಂವಿಧಾನವನ್ನು ಅಳವಡಿಸಿಕೊಂಡು ಇದೇ 26 ನವೆಂಬರ್‌ನಲ್ಲಿ 75 ವರ್ಷಗಳು ಆಗುತ್ತಿದ್ದು. 100 ದಿನಗಳ ಅಭಿಯಾನ ಮಾಡಲು ಆಲೋಚಿಸಲಾಗಿದೆ. ಇಡೀ ದೇಶದಾದ್ಯಂತ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಹಾಗೂ ಪ್ರತಿ ಗ್ರಾಮದಲ್ಲಿ ಇಬ್ಬರು ಸಂವಿಧಾನ ರಕ್ಷಕರನ್ನು ಗುರುತಿಸಲಾಗುತ್ತದೆ. ಹಾಗೂ ಗ್ರಾಮ ಸಭೆಯನ್ನು ಏರ್ಪಡಿಸಿ ಸಂವಿಧಾನದ ಪೀಠಿಕೆಯನ್ನು ಓದಲಾಗುತ್ತದೆ. ಇಷ್ಟು ಕಾರ್ಯಕ್ರಮಗಳನ್ನು ಸಂವಿಧಾನದ ರಕ್ಷಣೆಗಾಗಿ, ಅದರ ಮಹತ್ವವನ್ನು ತಿಳಿಸಲು ಪಣತೊಟ್ಟಿದ್ದೇವೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ನಾಯಕರು ಹಾಗೂ ಪಕ್ಷದ ಘಟಕಗಳು ಈ ವಿಷಯವನ್ನು ಜೀವಂತವಾಗಿ ಇಟ್ಟುಕೊಳ್ಳಬೇಕು. ನರೇಟಿವ್ ರೂಪಿಸಬೇಕು. ಏಕೆಂದರೆ ಬಿಜೆಪಿಯನ್ನು ನಂಬಲು ಸಾಧ್ಯವಿಲ್ಲ ಎಂದರು.