ಹುಣಸೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ 75ನೇ ಗಣರಾಜ್ಯೋತ್ಸವ ಸಮಾರಂಭವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಡಿ.ಹರೀಶ್‌ಗೌಡ, ಸಂವಿಧಾನದ ಆಶಯಗಳಂತೆ ನಾವೆಲ್ಲರೂ ಬದುಕುತ್ತಿದ್ದೇವೆ. ಸಂವಿಧಾನದ ಆಶಯಗಳನ್ನು ಚಾಚೂತಪ್ಪದೆ ಆಡಳಿತದಲ್ಲಿ ಜಾರಿಗೊಳಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಸಂವಿಧಾನದ ಆಶಯದಂತೆ ಅಧಿಕಾರ ನಡೆಸಿದ ಅವರು, ಸಾಮಾಜಿಕ ನ್ಯಾಯ ನೀಡುವಲ್ಲಿ ಇಡೀ ದೇಶಕ್ಕೆ ಮಾದರಿಯಾದರು. ಹಾಗಾಗಿ ಸಂವಿಧಾನ ಪಾಲನೆ ನಮ್ಮ ಜೀವನದ ಪ್ರತಿ ಕ್ಷಣದಲ್ಲೂ ಆಗಲಿ ಎಂದರು.
ಉಪವಿಭಾಗಾಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೇರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸುಸಂಸ್ಕೃತ ಮತ್ತು ಸಾಂಸ್ಕೃತಿಕ ದೇಶವನ್ನು ಕಟ್ಟುವ ಕಾರ್ವನ್ನು ನಾವೆಲ್ಲರೂ ಮಾಡೋಣ. ಭಾರತ ವಿಶ್ವಗುರು ಆಗುವಲ್ಲಿ ಯಾವುದೇ ಸಂಶಯವಿರುವುದಿಲ್ಲ. ಯುವಸಮೂಹ ಇತ್ತ ಹೆಚ್ಚು ಗಮನಹರಿಸಲಿ ಎಂದರು.
ಸಮಾರಂಭದಲ್ಲಿ ನಗರದ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ಬ್ಯಾಂಡ್ ಸೆಟ್ ಪಥ ಸಂಚಲನ ನಡೆಯಿತು. ಪೊಲೀಸ್ ಸಿಬ್ಬಂದಿ ಪೆರೇಡ್ ನಡೆಸಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿದರು. ತಹಸೀಲ್ದಾರ್ ಮಂಜುನಾಥ್, ಇಒ ಬಿ.ಕೆ.ಮನು, ನಗರಸಭಾ ಸದಸ್ಯರಾದ ಕೃಷ್ಣರಾಜ ಗುಪ್ತ, ಶರವಣ, ವಿವೇಕ್, ಬಿಇಒ ಎಸ್.ರೇವಣ್ಣ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಪಿ.ಆರ್.ರಾಚಪ್ಪ, ಎಸ್.ಜಯರಾಂ, ಸುಬ್ಬರಾವ್, ಭಾಸ್ಕರ್ ಹಾಜರಿದ್ದರು.