ನ್ಯೂಸ್

ದೈಹಿಕ ಪರೀಕ್ಷೆ ವೇಳೆ ಪ್ರಜ್ಞೆ ತಪ್ಪಿದ ಕಾನ್‌ಸ್ಟೇಬಲ್ ಆಕಾಂಕ್ಷಿ..ಬಳಿಕ ನಡೆದಿದ್ದೇ ಬೇರೆ!

ಮೇದಿನಿನಗರ (ಜಾರ್ಖಂಡ್): ಕಾನ್​ಸ್ಟೇಬಲ್ ನೇಮಕಾತಿ ಪ್ರಕ್ರಿಯೆಯ ದೈಹಿಕ ಪರೀಕ್ಷೆಯ ವೇಳೆ ಮೂರ್ಛೆ ತಪ್ಪಿ ಜಾರ್ಖಂಡ್‌ನ ಪಲಮು ಜಿಲ್ಲೆಯ ಮೇದಿನಿರಾಯ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 25 ಆಕಾಂಕ್ಷಿಗಳಲ್ಲಿ ಒಬ್ಬ ವ್ಯಕ್ತಿ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಒಬ್ಬ ಆಕಾಂಕ್ಷಿ ಸಾವನ್ನಪ್ಪಿದ್ದಾನೆ ಎಂದು ಮೇದಿನಿನಗರ ಟೌನ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಡೆಬ್ರತ್ ಪೊದ್ದಾರ್ ಶುಕ್ರವಾರ ಖಚಿತಪಡಿಸಿದ್ದಾರೆ. ಸಾವು ಸಂಭವಿಸಲು ಕಾರಣವೇನೆಂಬುದರ ಬಗ್ಗೆ ಈಗಲೇ ಏನೂ ಹೇಳಲಾಗದು ಎಂದು ವೈದ್ಯರು ತಿಳಿಸಿದ್ದಾರೆ.

ಗುರುವಾರ 25 ಆಕಾಂಕ್ಷಿಗಳು ಮೇದಿನಿನಗರದ ಚಿಯಾಂಕಿ ವಿಮಾನ ನಿಲ್ದಾಣದಲ್ಲಿ ದೈಹಿಕ ಪರೀಕ್ಷೆಯಲ್ಲಿ (ಓಟ) ಭಾಗವಹಿಸಿದ್ದಾಗಲೇ ಮೂರ್ಛೆ ಹೋಗಿದ್ದರು.

ಮೂರು ದಿನಗಳ ನೇಮಕಾತಿ ಪ್ರಕ್ರಿಯೆಯಲ್ಲಿ 60 ಅಭ್ಯರ್ಥಿಗಳು ಮೂರ್ಛೆ ಹೋಗಿದ್ದಾರೆ. ನೇಮಕಾತಿ ಪ್ರಕ್ರಿಯೆಯು ಸೆಪ್ಟೆಂಬರ್ 9 ರವರೆಗೆ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂರ್ಛೆ ಹೋದವರಲ್ಲಿ ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.