ಬಂಗಾರಪೇಟೆ: ಕೋಲಾರ ಹಾಲು ಒಕ್ಕೂಟದ ಚುನಾವಣೆಗಾಗಿ ಕ್ಷೇತ್ರ ವಿಂಗಡಣೆ ಮಾಡುವುದರಲ್ಲಿ ಕೋಲಾರ ಹಾಲು ಒಕ್ಕೂಟದ ಎಂಡಿ ಗೋಪಾಲಸ್ವಾಮಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ, ಕೋಚಿಮುಲ್ ಒಕ್ಕೂಟದ ಷಡ್ಯಂತ್ರದಂತೆ ಕೆಲಸ ಮಾಡಿದ್ದಾರೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪಿಸಿದರು.
ಪಟ್ಟಣದ ಪುರಸಭೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ 11 ಕ್ಷೇತ್ರಗಳಿಗೆ ಕ್ಷೇತ್ರ ವಿಂಗಡಣೆ ಮಾಡಬೇಕೆಂದು ಕೋಚಿಮುಲ್ ಎಂಡಿಗೆ ಸರ್ಕಾರ ಆದೇಶಿಸಿತ್ತು. ಜಿಲ್ಲೆಗೆ ಸೇರ್ಪಡುವ ಸಂಘಗಳನ್ನು ವಿಂಗಡಣೆ ಮಾಡಿ ಸಭೆಯಲ್ಲಿ ಮಂಡನೆ ಮಾಡಬೇಕು. ಜತೆಗೆ ಸಾರ್ವಜನಿಕರಿಂದ ಆಕ್ಷೇಪಣೆಗೆ ಪತ್ರಿಕೆಗಳ ಮೂಲ ಪ್ರಕಟಣೆ ಮಾಡಿ 30 ದಿನ ಸಮಯ ಕೋರಬೇಕು. ನಿಗದಿತ ಸಮಯದೊಳಗೆ ಆಕ್ಷೇಪಣೆ ಬಾರದಿದ್ದರೆ ಅಥವಾ ಬಂದಿದ್ದರೆ ಅದರ ಸಂಪೂರ್ಣ ಮಾಹಿತಿ ಸಹಕಾರ ಸಂಘಗಳ ಜಂಟಿ ನಿರ್ದೇಶಕರಿಗೆ ಕಳುಹಿಸಲು ಸೂಚಿಸಲಾಗಿತ್ತು.
ಆದರೆ, ಗೋಪಾಲಸ್ವಾಮಿ ಉದ್ದೇಶಪೂರ್ವಕವಾಗಿ ಸರ್ಕಾರದ ಕಾನೂನನ್ನು ಗಾಳಿಗೆ ತೂರಿ ಯಾವುದೇ ಸಭೆ ಕರೆದಿಲ್ಲ, ನೋಟಿಸ್ ಸಹ ನೀಡಿಲ್ಲ. ಕೋಚಿಮುಲ್ ಕಚೇರಿ ನನ್ನ ಕ್ಷೇತ್ರದ ವ್ಯಾಪ್ತಿಗೆ ಸೇರುವುದರಿಂದ ಕ್ಷೇತ್ರ ವಿಂಗಡಣೆ ವೇಳೆ ಗಮನಕ್ಕೆ ತನ್ನಿ ಎಂದು ಎಂಡಿಗೆ ಪತ್ರ ಬರೆಯಲಾಗಿತ್ತು. ಆದರೆ, ಕೋಚಿಮುಲ್ನ ಒಕ್ಕೂಟ ದೊಡ್ಡ ಷಡ್ಯಂತ್ರವನ್ನು ಬಯಸಿ ಎಂಡಿ ಮೇಲೆ ಪ್ರಭಾವ ಬೀರಿ ತಟಸ್ಥವಾಗಿರುವಂತೆ ಸೂಚಿಸಿದ್ದಾರೆ. ಇದನ್ನೇ ಬಂಡವಾಲವನ್ನಾಗಿ ಮಾಡಿಕೊಂಡಂತ ಜೆ.ಆರ್ ಅಶ್ವತ್ಥನಾರಾಯಣ ಏಕಾಏಕಿ ಕ್ಷೇತ್ರ ವಿಂಗಡಣೆಯಾಗಿದೆ ಎಂದು ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರ ವಿಂಗಡಣೆ ವಿಚಾರವಾಗಿ ಜೆಆರ್ ಮಟ್ಟದಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದೆ ಎಂಬ ಊಹಾಪೋಹಗಳಿವೆ. ಇದರಲ್ಲಿ ಅನೇಕರು ಹಣಕ್ಕಾಗಿ ಶಾಮೀಲಾಗಿದ್ದಾರೆ ಎಂಬ ಅನುಮಾನ ಇದೆ. ಸಾರ್ವಜನಿಕರ ಆಕ್ಷೇಪಣೆ ಪಡೆಯದೇ ಜಿಲ್ಲೆಯ ಜನತೆಗೆ ಮೋಸ ಮಾಡಿ 11 ಕ್ಷೇತ್ರಗಳನ್ನು ವಿಭಜನೆ ಮಾಡಿರುವುದು ಕಾನೂನು ಬಾಹಿರ ಎಂದರು.
ಈ ಬಗ್ಗೆ ವಿಚಾರಿಸಲು ಸಂಬಂಧಪಟ್ಟ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮಾತನಾಡಿದ್ದು, ಜಿಲ್ಲಾಮಟ್ಟದಲ್ಲಿ ಮೋಸ ಮಾಡಿದ ವಿಚಾರ ಸಚಿವರ ಗಮನಕ್ಕೂ ಹೋಗಿಲ್ಲ. ಆಡಳಿತಾಧಿಕಾರಿ ಆಗಿರುವ ಎಸಿಯವರಿಗೆ ಎಂಡಿ ಮತ್ತು ಸಿಬ್ಬಂದಿ ಮೋಸ ಮಾಡಿದ್ದಾರೆ ಎಂದು ಗುಡುಗಿದರು.
ತನಿಖೆಯಾಗಲಿ
ಎಂವಿ ಕೃಷ್ಣಪ್ಪ ಹೆಸರಿನಲ್ಲಿ ನಿಮಾರ್ಣವಾಗುತ್ತಿರುವ ಎಂ.ವಿ.ಕೆ ಗೋಲ್ಡನ್ ಡೇರಿ ಕುರಿತು ಸಾರ್ವಜನಿಕರಿಗೆ ಗೊತ್ತಾಗಬೇಕಿದೆ. ಡೇರಿ ನಿಮಾರ್ಣದಲ್ಲಿ ಒಂದೇ ಕುಟುಂಬದವರು ಭಾಗಿಯಾಗಿದ್ದು, ಅವರೇ ಗುತ್ತಿಗೆದಾರರು ಅವರೇ ಸಪ್ಲೆಯರ್ಸ್ ಆಗಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡೇರಿ ನಿಮಾರ್ಣದಲ್ಲಿ ಅನೇಕ ಅವ್ಯವಹಾರಗಳು ನಡೆದಿದ್ದು, ಇವೆಲ್ಲವನ್ನು ಮುಂದೆ ತನಿಖೆ ಮಾಡಬೇಕು ಎಂದು ಹೆಸರು ಹೇಳದೆ ಪರೋಕ್ಷವಾಗಿ ಮಾಲೂರು ಶಾಸಕ ನಂಜೇಗೌಡರ ವಿರುದ್ಧ ಕಿಡಿಕಾರಿದರು.
ಹೊಳಲಿ ಗ್ರಾಮದಲ್ಲಿ 50 ಎಕರೆ ಜಾಗವನ್ನು ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ ಅಕ್ರಮವಾಗಿ ಜಿಲ್ಲಾಧಿಕಾರಿ ನೀಡಿದ್ದಾರೆ. ಡಿಸಿಗೆ 10 ಎಕರೆ ಅಷ್ಟೇ ನೀಡಲು ಅಧಿಕಾರವಿದ್ದರೂ, 50 ಎಕರೆ ಹೇಗೆ ಒಕ್ಕೂಟಕ್ಕೆ ನೀಡಿದ್ದಾರೆ.ಮೇವು ಬೆಳೆಯುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿ ಈಗ ಸೋಲಾರ್ ವಿದ್ಯುತ್ ಉತ್ಪಾದನೆಗೆ ಭೂಮಿ ಬಳಕೆ ಮಾಡಲಾಗುತ್ತಿದ್ದು, ಹಣದಾಸೆಗೆ ಭೂಮಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.