ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರದ ದಾಳಿ ನಡೆಸಲು ಯೋಜಿಸಿದ್ದ ಶಂಕಿತ ಉಗ್ರನನ್ನು ಗುಜರಾತ್ನ ಭಯೋತ್ಪಾದನಾ ನಿಗ್ರಹ ದಳ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಸಹಯೋಗದೊಂದಿಗೆ ಬಂಧಿಸಲಾಗಿದೆ.
ಉತ್ತರ ಪ್ರದೇಶದ ಫರೀದಾಬಾದ್ನಲ್ಲಿ ಭಾನುವಾರ 19 ವರ್ಷದ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ ಎರಡು ಹ್ಯಾಂಡ್ ಗ್ರನೇಡ್ಗಳು ಮತ್ತು ಕೆಲವು ಆಕ್ಷೇಪಾರ್ಹ ಪ್ರಕಟಣೆಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಗ್ರನೇಡ್ಗಳನ್ನು ಬಾಂಬ್ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸಿದೆ. ಈತ ರಾಮಮಂದಿರ ಸೇರಿ ಹಲವು ಧಾರ್ವಿುಕ ಸ್ಥಳಗಳಲ್ಲಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದ ಎಂದು ತಿಳಿದು ಬಂದಿದೆ. ಗುಜರಾತ್ ಎಟಿಎಸ್ ಅಧಿಕಾರಿಗಳು ಶಂಕಿತ ಉಗ್ರನನ್ನು ಗುಜರಾತ್ಗೆ ಕರೆದೊಯ್ದು, ವಿಚಾರಣೆ ನಡೆಸುತ್ತಿದ್ದಾರೆ.
ಗುಜರಾತ್ ಎಟಿಎಸ್ ಅಧಿಕಾರಿಗಳು ಬೇರೊಂದು ಪ್ರಕರಣದಲ್ಲಿ ಬಂಧಿಸಿದ್ದ ವ್ಯಕ್ತಿಯಿಂದ ಅಬ್ದುಲ್ ರೆಹಮಾನ್ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ವಿವಿಧ ತನಿಖಾ ಸಂಸ್ಥೆಗಳು ಅಬ್ದುಲ್ ಬಂಧನಕ್ಕೆ ಯೋಜನೆ ಸಿದ್ಧಪಡಿಸಿದ್ದರು. ಈತ ವಿದೇಶದಲ್ಲಿರುವ ಉಗ್ರರ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ತನಿಖೆ ವೇಳೆ ‘ನಾನು ರಾಮಮಂದಿರಕ್ಕೆ 2 ಬಾರಿ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದೆ. ಫೈಜಾಬಾದ್ನಿಂದ ರೈಲಿನ ಮೂಲಕ ಫರೀದಾಬಾದ್ಗೆ
ಬಂದಿದ್ದೆ. ಫರೀದಾಬಾದ್ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 2 ಹ್ಯಾಂಡ್ ಗ್ರನೇಡ್ಗಳನ್ನು ನೀಡಿದ್ದ. ನಿರ್ದೇಶನ ನೀಡುತ್ತಿದ್ದ ವ್ಯಕ್ತಿ ನನಗೆ ಫರೀದಾಬಾದ್ನಲ್ಲೇ ಉಳಿದುಕೊಳ್ಳುವಂತೆ ಸೂಚಿಸಿದ್ದ’ ಎಂದು ಅಬ್ದುಲ್ ಪೊಲೀಸರಿಗೆ ತಿಳಿಸಿದ್ದಾನೆ.
ಕುಂಭಮೇಳದ ಕಾರಣದಿಂದಾಗಿ ಭಕ್ತರ ಅನುಕೂಲಕ್ಕೆ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮನ ದರ್ಶನದ ಸಮಯ ಬದಲಾವಣೆ ಮಾಡಲಾಗಿತ್ತು. ಕುಂಭಮೇಳ ಮುಗಿದ ಬೆನ್ನಲ್ಲೇ ಮತ್ತೆ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನದ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಮಂಗಳ ಆರತಿ ಬೆಳಗ್ಗೆ 4 ಗಂಟೆಗೆ ನಡೆಯಲಿದ್ದು, 4:15ರಿಂದ ಬೆಳಗ್ಗೆ 6ರ ವರೆಗೆ ಗರ್ಭ ಗುಡಿಯನ್ನ ಮುಚ್ಚಲಾಗುವುದು. ಬಳಿಕ 6 ಗಂಟೆಗೆ ಶೃಂಗಾರ ಆರತಿ ನಡೆಯಲಿದ್ದು, ಬೆಳಗ್ಗೆ 6. 30ರಿಂದ ಬೆಳಗ್ಗೆ 11:50ರವರೆಗೆ ಬಾಲ ರಾಮನ ದರ್ಶನ ಲಭ್ಯವಿರಲಿದೆ.
ಮಧ್ಯಾಹ್ನ 12ರಿಂದ 12:30ರವರೆಗೆ ಭೋಗ ಆರತಿ ಮತ್ತು ದೇವರ ದರ್ಶನ ಲಭ್ಯವಿದ್ದು, 1 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮಧ್ಯಾಹ್ನ 1ರಿಂದ ಸಂಜೆ 6:50 ರವರೆಗೆ ರಾಮನ ದರ್ಶನ ಲಭ್ಯವಿರಲಿದ್ದು, ಬಳಿಕ 7ರಿಂದ ರಾತ್ರಿ 9.30ರ ವರೆಗೆ ಬಾಲ ರಾಮನ ದರ್ಶನಕ್ಕೆ ಅವಕಾಶ ಇರಲಿದೆ. 9.45ಕ್ಕೆ ಸಂಧ್ಯಾರತಿ ಹಾಗೂ ರಾತ್ರಿ 10ಕ್ಕೆ ಶಯನ ಆರತಿಯೊಂದಿಗೆ 10.15ಕ್ಕೆ ಗರ್ಭಗುಡಿಯ ಬಾಗಿಲು ಮುಚ್ಚಲಾಗುವುದು ಎಂದು ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.