ನ್ಯೂಸ್

ಹತಾಶ ಸಿಎಂ ಸಿದ್ದರಾಮಯ್ಯರಿಂದ ಯಡಿಯೂರಪ್ಪ ವಿರುದ್ಧ ಷಡ್ಯಂತ್ರ: ಬಿ.ವೈ.ವಿಜಯೇಂದ್ರ ಆರೋಪ

ಬೆಂಗಳೂರು: ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಿನ ದವಡೆಗೆ ಸಿಲುಕಿದೆ. ಮುಖ್ಯಮಂತ್ರಿ ಸ್ಥಾನದ ಬುಡಕ್ಕೆ ಬರುತ್ತದೆ ಎಂದು ಹತಾಶರಾದ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಸರ್ಕಾರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ಹೂಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು‌.

ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಕಾಂಗ್ರೆಸ್ ಸರ್ಕಾರವೇ ನೇಮಿಸಿದ ನ್ಯಾ.ಕುನ್ಹಾ ಅವರಿಂದ ತರಾತುರಿಯಲ್ಲಿ ವರದಿ ತರಿಸಿಕೊಂಡಿದೆ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕುವ ಇಂತಹ ಕುತಂತ್ರ ಫಲಿಸುವುದಿಲ್ಲ.

ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪ ಎದುರಿಸಿದಷ್ಟು ಷಡ್ಯಂತ್ರ, ಕುತಂತ್ರಗಳನ್ನು ಬೇರೆ ಯಾರೂ ಎದುರಿಸಿಲ್ಲ. ಇಂತಹ ಪ್ರಯತ್ನಗಳ ವಿರುದ್ಧ ಯಡಿಯೂರಪ್ಪ ಗೆಲುವು ಸಾಧಿಸಿ, ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು‌‌.

ಕೋವಿಡ್ ಖರೀದಿಯಲ್ಲಿ ಅಕ್ರಮ ಆಗಿದೆಯೋ ಇಲ್ಲವೋ ? ಎಂದು ತನಿಖೆಗೆ ರಚಿತ ನ್ಯಾ.ಕುನ್ಹಾ ಆಯೋಗವು ಪಿಪಿಇ ಕಿಟ್ ಖರೀದಿಯಲ್ಲಿ ಅಕ್ರಮವಾಗಿ ಎಂದು ನೇರವಾಗಿ ಹೇಳಿಲ್ಲ. ಈ ವ್ಯವಹಾರದಲ್ಲಿ ಅನುಕೂಲ ಅಥವಾ ಲಾಭ ಆಗಿರಬಹುದು ಎನ್ನುವ ಸಂಶಯ ವ್ಯಕ್ತಪಡಿಸಿದೆಯಷ್ಟೇ ಎಂದು ಸಮರ್ಥಿಸಿಕೊಂಡರು.

ಎದುರಾಳಿಗಳನ್ನು ರಾಜಕೀಯವಾಗಿ ಮುಗಿಸಲು ಏನೆಲ್ಲ ಮಾಡಬೇಕು, ಯಾವ ರೀತಿ ಆಯೋಗ ರಚನೆ ಮಾಡಬೇಕು. ವರದಿ ತರಿಸಿಕೊಳ್ಳಬೇಕು ಎನ್ನುವುದರಲ್ಲಿ ಕಾಂಗ್ರೆಸ್ ನವರು ನಿಸ್ಸೀಮರು. ಕೋವಿಡ್ ಕುರಿತು ನ್ಯಾ.ಕುನ್ಹಾ ವರದಿಯು ಅದರದ್ದೇ ಒಂದು ಭಾಗವಾಗಿದೆ. ಯಡಿಯೂರಪ್ಪ ಸಿಎಂ ಆಗಿ ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ, ಜೀವ ಹಾಗೂ ಜೀವನ ಉಳಿಸಲು ಶ್ರಮಿಸಿದ ರೀತಿ ರಾಜ್ಯದ ಜನರಿಗೆ ಗೊತ್ತಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಶೂರ, ಧೈರ್ಯಶಾಲಿಯಂತೆ ಹಾಜರು

ಮುಡಾ ಹಗರಣದ ಆರೋಪಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಕೊಂಡ ಕುಳಿತ ಸಿಎಂ ಸಿದ್ದರಾಮಯ್ಯ ಭಂಡತನ ಮೆರೆದಿದ್ದಾರೆ. ಧೈರ್ಯಶಾಲಿ ಹಾಗೂ ಶೂರರಂತೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ. ಸಿಎಂ ಆಗಿ ಯಾವ ಪ್ರಕರಣದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದರಲ್ಲಿ ಪಳಗಿದ್ದಾರೆ ಎಂದು ಕುಟುಕಿದರು.

ಸಿಎಂ ಸಿದ್ದರಾಮಯ್ಯ ಸ್ವತಃ ರಕ್ಷಿಸಿಕೊಳ್ಳುವ ಜತೆಗೆ ಸಚಿವರು ಹಾಗೂ ಸ್ವಪಕ್ಷದ ಶಾಸಕರನ್ನು ಹೇಗೆ ರಕ್ಷಿಸಬೇಕು, ಆರೋಪ ಪ್ರಕರಣಗಳಿಂದ ಪಾರು ಮಾಡಬೇಕು ಎಂದು ಬಲ್ಲವರು, ಅದರಲ್ಲಿ ಚೆನ್ನಾಗಿ ನುರಿತವರೂ ಆಗಿದ್ದಾರೆ ಎಂದು ಹೇಳಿದರು‌‌‌.

ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗ ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಗಳ ತನಿಖೆಯೇ ಆಗದಂತೆ ತಂತ್ರ ಹೂಡಿದರು. ಲೋಕಾಯುಕ್ತ ಸಂಸ್ಥೆ ಮುಚ್ಚಿ, ಎಸಿಬಿ ರಚಿಸಿ ತಮ್ಮ ವಿರುದ್ಧದ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಹಾಕಿಸಿಕೊಂಡರು. ಅರ್ಕಾವತಿ ರೀ ಡು ಪ್ರಕರಣದಲ್ಲಿ ಆಯೋಗ ರಚಿಸಿ ವರದಿ ತರಿಸಿಕೊಂಡು ಹೊರ ಬರದಂತೆ ನೋಡಿಕೊಂಡರು ಎಂಬುದು ನಮಗೆ ಗೊತ್ತಿದೆ, ರಾಜ್ಯದ ಜನರಿಗೂ ಗೊತ್ತಿದೆ ಎಂದು ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.