ರೈತ ಉತ್ಪಾದಕ ಒಕ್ಕೂಟಗಳ ಪಾತ್ರ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಕಾರ್ಯಾಗಾರವನ್ನು ಗುರುದತ್ತ ಹೆಗಡೆ ಉದ್ಘಾಟಿಸಿದರು. ಶರತ್ ಪಿ.ಗೌಡ, ಡಾ.ಎ.ಬಾಬುರತ್ನ, ಶಿವಕುಮಾರ್, ಭದ್ರೀಶ್ ಮುಂತಾದವರಿದ್ದರು 
ನ್ಯೂಸ್

ಕೃಷಿಯನ್ನು ಉದ್ಯಮವಾಗಿ ಪರಿಗಣಿಸಿ: ಗುರುದತ್ತ ಹೆಗಡೆ

ಶಿವಮೊಗ್ಗ: ರೈತರು ಕೃಷಿಯನ್ನು ಕೇವಲ ಭಾವನಾತ್ಮಕ ದೃಷ್ಟಿಯಿಂದ ಪರಿಗಣಿಸದೆ ಅದನ್ನು ಉದ್ಯಮವಾಗಿ ಕಾಣಬೇಕು. ಆಗ ಮಾತ್ರ ಕೃಷಿಯಲ್ಲಿ ಲಾಭ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ರೈತ ಉತ್ಪಾದಕ ಒಕ್ಕೂಟಗಳ ಪಾತ್ರ ಕುರಿತು ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ, ಕೃಷಿ ಇಲಾಖೆ ಹಾಗೂ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಬಹುದೊಡ್ಡ ಸಮೂಹಕ್ಕೆ ಕೃಷಿಯೇ ಪ್ರಮುಖ ವೃತ್ತಿಯಾಗಿದೆ. ದುರಂತವೆಂದರೆ ಇಲ್ಲಿಯೇ ಹೆಚ್ಚು ತೊಂದರೆಗಳಿವೆ. ಅನಿಶ್ಚಿತತೆಯಲ್ಲಿ ರೈತರು ಬೆಳೆ ಬೆಳೆಯುತ್ತಿದ್ದಾರೆ. ಬೆಳೆಗೆ ಸರಿಯಾದ ಬೆಳೆ ಸಿಗದ ಪರಿಸ್ಥಿತಿಯಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆನ್ನುವ ಪ್ರಯತ್ನ ಹಲವಾರು ವರ್ಷಗಳಿಂದಲೂ ನಡೆದಿದೆ. ಆದರೂ ಅದಕ್ಕೆ ಪರಿಹಾರ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಯನ್ನು ಕೇವಲ ಭಾವನಾತ್ಮಕವಾಗಿ ನೋಡದೆ, ಅದನ್ನು ಉದ್ಯಮವಾಗಿ ಪರಿಗಣಿಸಬೇಕು ಎಂದರು.

ಕೃಷಿ ಉತ್ಪನ್ನಗಳಿಗೆ ಈಗ ಮಾರುಕಟ್ಟೆ ಸಮಸ್ಯೆಯಿದೆ. ಇದನ್ನು ನಿಭಾಯಿಸಲು ಸರ್ಕಾರ ಹಲವು ರೀತಿ ಪ್ರಯತ್ನ ನಡೆಸುತ್ತಿರುವುದರ ನಡುವೆಯೇ ಸಹಕಾರಿ ಕ್ಷೇತ್ರವೂ ಕೂಡ ಪ್ರಯತ್ನ ನಡೆಸಿದೆ. ಆದರೆ ಸಹಕಾರಿ ಕ್ಷೇತ್ರದಲ್ಲಿ ಒಂದಷ್ಟು ಲೋಪದೋಷಗಳಾಗಿದ್ದನ್ನು ನಾವು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ರೈತ ಉತ್ಪಾದಕ ಕಂಪನಿಗಳ ಪಾತ್ರ ದೊಡ್ಡದಿದೆ. ಇಲ್ಲಿ ರೈತರಿಗೆ ಸಮರ್ಥವಾಗಿ ನ್ಯಾಯ ಕೊಡಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ರೈತ ಉತ್ಪಾದಕ ಕಂಪನಿಗಳ ಸ್ಥಾಪನೆ ಮತ್ತು ಉತ್ತೇಜನಕ್ಕೆ ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಮತ್ತು ಚೈತನ್ಯ ರೂರಲ್ ಡೆವೆಲಪ್‌ಮೆಂಟ್ ಸೊಸೈಟಿ ಉತ್ತಮ ಕೆಲಸ ಮಾಡುತ್ತಿವೆ. ಇಂತಹ ಪ್ರಯತ್ನಗಳ ಮೂಲಕ ರೈತರು ಸಂಘಟಿತರಾಗಿ ಕೆಲಸ ಮಾಡಿದರೆ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಪಡೆಯಲು ಸಾಧ್ಯವಾಗಲಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ರೈತ ಉತ್ಪಾದಕ ಕಂಪನಿಗಳಿಗೆ ನೆರವು ಅಗತ್ಯವಿದ್ದರೆ ಅದನ್ನು ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಜಿಪಂ ಸಿಇಒ ಎನ್.ಹೇಮಂತ್, ರೈತ ಉತ್ಪಾದಕ ಕಂಪನಿಗಳ ಒಕ್ಕೂಟದ ನಿರ್ದೇಶಕ ಭದ್ರೀಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಕಿರಣ್ ಕುಮಾರ್, ನಬಾರ್ಡ್ ಡಿಡಿಎಂ ಶರತ್ ಪಿ.ಗೌಡ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಎ.ಬಾಬುರತ್ನ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಕುಮಾರ್, ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟದ ಅಧ್ಯಕ್ಷ ಬಿ.ಅನೂಪ್, ಉಪಾಧ್ಯಕ್ಷ ಸತೀಶ್ ಮುಂತಾದವರಿದ್ದರು.