ಸಾಗರ: ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಕಡಿತಗೊಳಿಸಿದ್ದನ್ನು ವಿರೋಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮನೆ ಎದುರು ಧರಣಿ ಸತ್ಯಾಗ್ರಹ ನಡೆಸುವ ನಿರ್ಧಾರ ಕೈಬಿಡಲಾಗಿದೆ. ಆದರೆ ಕೂಡಲೇ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ಒತ್ತಾಯಿಸಿದರು.
ಶಿರವಂತೆ ಗ್ರಾಪಂ ವ್ಯಾಪ್ತಿಯ ರೈತರ ಜಮೀನುಗಳ ಕೃಷಿ ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಸಂಬಂಧ ಮೆಸ್ಕಾಂ ಅಧಿಕಾರಿಗಳ ಧೋರಣೆ ಖಂಡಿಸಿ ಮಾ.5ರಂದು ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೆ ಸಚಿವರ ಆಪ್ತ ಸಹಾಯಕರು ಮತ್ತು ಬೆಂಬಲಿಗರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ನಿರ್ಧಾರ ಹಿಂಪಡೆಯಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪದೇಪದೆ ವಿದ್ಯುತ್ ಪರಿವರ್ತಕಗಳು ಕೆಟ್ಟುಹೋಗುತ್ತಿವೆ. ಇದರಿಂದ ಫಸಲಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಫಸಲು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ರೈತರು ಅನಧಿಕೃತವಾಗಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯ ಪಡೆದಿದ್ದಾರೆ. ಅದನ್ನು ಸಕ್ರಮಗೊಳಿಸುವ ಕೆಲಸವಾಗಿಲ್ಲ. ಅಧಿಕೃತ ಆರ್‌ಆರ್ ನಂಬರ್ ಇಲ್ಲದಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ತಕ್ಷಣ ಕೃಷಿ ಪಂಪ್‌ಸೆಟ್‌ಗಳಿಗೆ ತಾತ್ಕಾಲಿಕ ಆರ್‌ಆರ್ ನಂಬರ್ ನೀಡಿ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ಪದೇಪದೆ ವಿದ್ಯುತ್ ಪರಿವರ್ತಕಗಳು ಕೈಕೊಡುತ್ತಿವೆ. ದುರಸ್ತಿ ಕೇಂದ್ರದಲ್ಲೂ ವಿಳಂಬ ಮಾಡಲಾಗುತ್ತಿದೆ. ಶಾಸಕರು ಮತ್ತು ಸಚಿವರು ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಅವರ ಮನೆ ಎದುರು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.