ಬೆಂಗಳೂರು: ಕಾಂಗ್ರೆಸ್‌ನಲ್ಲಿ ಒಬ್ಬರು ಯುದ್ಧ ಬೇಕು ಎಂದರೆ, ಮತ್ತೊಬ್ಬರು ಶಾಂತಿ ಬೇಕು ಎನ್ನುತ್ತಾರೆ. ಎಐಸಿಸಿಯಲ್ಲಿ ಈ ಬಗ್ಗೆ ಸರಿಯಾದ ನಿಲುವು ಪ್ರಕಟಿಸಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಭಯೋತ್ಪಾದಕರ ದಾಳಿಗಳಿಗೆ ನರೇಂದ್ರ ಮೋದಿ ದಿಟ್ಟ, ಉತ್ತರ ನೀಡಿದ್ದಾರೆ. ಮುಂಬೈ ಉಗ್ರರ ದಾಳಿಯಲ್ಲಿ 175 ಜನರು ಸತ್ತರೂ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ತಟಸ್ಥವಾಗಿತ್ತು ಎಂದು ಟೀಕಿಸಿದರು.
ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ಬಗ್ಗೆ ಕೇಂದ್ರ ಸಚಿವರು, ಪಕ್ಷದ ರಾಷ್ಟ್ರೀಯ ನಾಯಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಆಡಳಿತದಲ್ಲಿ ಅಮೆರಿಕದ ಬಳಿ ಗೋಧಿ ಭಿಕ್ಷೆ ಬೇಡಿದ್ದನ್ನು ಅವರಿಗೆ ನೆನಪಿಸುವೆ ಎಂದು ಕುಟುಕಿದರು.
ಜಮ್ಮು-ಕಾಶ್ಮೀರದಿಂದ ಹಿಡಿದು ದೇಶದ ಎಲ್ಲ ರಾಜ್ಯಗಳು ಮೋದಿ ಪರವಾಗಿ ನಿಂತಿದ್ದಾರೆ. ಕದನ ವಿರಾಮವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಆದಿಯಾಗಿ ಎಲ್ಲರೂ ಸ್ವಾಗತಿಸಿದರೆ ಕೆಲವು ಸಚಿವರು ಮೊಸರಲ್ಲಿ ಕಲ್ಲು ಹುಡುಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರ್.ಅಶೋಕ್ ಟೀಕಿಸಿದರು.
ಕಾಂಗ್ರೆಸ್‌ನಲ್ಲೇ ಅನೇಕ ಗುಂಪುಗಳಿದ್ದು, ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುತ್ತಾರೆ. ಜೈರಾಮ್ ರಮೇಶ್ ಅವರು ಎಚ್ಚರಿಕೆ ನೀಡಿದ ನಂತರವೂ ಎಲ್ಲರೂ ವಿರುದ್ಧ ಹೇಳಿಕೆ ನೀಡುತ್ತಾರೆ ಎಂದು ದೂರಿದರು.
ಬೆಂಗಳೂರನ್ನು ಗ್ರೇಟರ್ ಅಲ್ಲ, ಕ್ವಾರ್ಟರ್ ಬೆಂಗಳೂರು ಮಾಡಿದ್ದಾರೆ. ನಾಡಪ್ರಭು ಕೆಂಪೇಗೌಡರು ಒಂದು ಬೆಂಗಳೂರು ಕಟ್ಟಿದರೆ, ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಮೂರು ಭಾಗ ಮಾಡಿದ್ದು, ಇದರಿಂದಾಗಿ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಆಕ್ಷೇಪಿಸಿದರು.
110 ಹಳ್ಳಿಗಳಲ್ಲಿ ಜನರಿಗೆ ಹೆಚ್ಚು ತೆರಿಗೆ ವಿಧಿಸಲಾಗಿದೆ. ಯಾರದ್ದೋ ಜಮೀನಿಗೆ ಬೆಲೆ ಹೆಚ್ಚುವಂತೆ ಮಾಡಲು ಇಂತಹ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಕೆಂಪೇಗೌಡರ ಚಿಂತನೆಗೆ ದ್ರೋಹ ಬಗೆದಂತಾಗಿದೆ ಎಂದು ಆರೋಪಿಸಿದರು.
ಬಿಬಿಎಂಪಿ ಚುನಾವಣೆ ಮುಂದೂಡಲು ಈ ಪ್ರಯತ್ನ ಮಾಡಿದ್ದಾರೆ. ಬೆಂಗಳೂರು ವಿಭಜನೆ ಸರಿಯಲ್ಲ ಎಂಬ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಗ್ರೇಟರ್ ಬೆಂಗಳೂರು ವಿರುದ್ಧ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಆರ್.ಅಶೋಕ್ ಸ್ಪಷ್ಟಪಡಿಸಿದರು.