ಮದ್ದೂರು ಪಟ್ಟಣದ ಜಯಲಕ್ಷ್ಮೀ ನಂಜಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯನ್ನು ಡಿ.ಸಿ.ತಮ್ಮಣ್ಣ ಉದ್ಘಾಟಿಸಿದರು. ಸುರೇಶ್‌ಗೌಡ, ಬಿಳಿಯಪ್ಪ, ಮಾದನಾಯಕನಹಳ್ಳಿ ರಾಜಣ್ಣ, ಪಿ.ಸಂದರ್ಶ, ಪ್ರಿಯಾಂಕಾಅಪ್ಪುಗೌಡ, ಸುಮಿತ್ರಾರಮೇಶ್ ಇದ್ದರು.  
ನ್ಯೂಸ್

ಅಧಿಕಾರ ಹಿಡಿಯಲು ಕಾಂಗ್ರೆಸ್ ವಾಮ ಮಾರ್ಗ

ಶಿವಶಂಕರ್ ಎಂ. ಹೆಬ್ಬಳ್ಳ

ಮದ್ದೂರು : ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಸಹಕಾರ ಸಂಘಗಳ ಅಧಿಕಾರ ಹಿಡಿಯಲು ಹಲವಾರು ವಾಮ ಮಾರ್ಗಗಳ ಮೂಲಕ ಅಧಿಕಾರಿಗಳನ್ನು ಹೆದರಿಸಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಅನುಕೂಲವಾಗುವ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಆರೋಪಿಸಿದರು.

ಪಟ್ಟಣದ ಜಯಲಕ್ಷ್ಮೀನಂಜಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಮನ್‌ಮುಲ್ ನಿರ್ದೇಶಕರ ಚುನಾವಣೆಯಲ್ಲಿ ಎನ್‌ಡಿಯ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಎಸ್.ಮಹೇಶ್ ಪರ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಡಳಿತ ಪಕ್ಷದವರ ಈ ರೀತಿಯ ನಡವಳಿಕೆ ಸರಿಯಲ್ಲ, ಅವರು ಇದೇ ರೀತಿ ನಡೆದುಕೊಳ್ಳುತ್ತಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಂದಿನ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಮನ್‌ಮುಲ್‌ನ ನಿರ್ದೇಶಕ ಸ್ಥಾನಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಎಸ್, ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿ ಎಸ್.ಮಹೇಶ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.

ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, 1970 ರಲ್ಲಿ ಕೃಷ್ಣಪ್ಪ ಅವರು ಪ್ರಥಮವಾಗಿ ಕರ್ನಾಟಕ ರಾಜ್ಯಕ್ಕೆ ವಿದೇಶಗಳಿಂದ ಹಸುಗಳಿಂದ ತರಿಸಿ ಡೇರಿ ಉದ್ಯಮಕ್ಕೆ ಮುನ್ನುಡಿ ಬರೆದರು. ನಂತರ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿದ್ದರು, ನಂತರದ ದಿನಗಳಲ್ಲಿ ಎಚ್.ಡಿ.ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಿದ್ದಾಗ ಹಾಲಿನ ಡೇರಿ ಉದ್ಯಮ ಸಾಕಷ್ಟುಪ್ರಗತಿ ಕಂಡಿತು ಎಂದರು.

ಹೈನುಗಾರಿಕೆಯಿಂದ ಬಹುತೇಕ ಗ್ರಾಮಗಳಲ್ಲಿ ಎಷ್ಟೋ ಕುಟುಂಬಗಳು ಆರ್ಥಿಕ ಚೇತರಿಕೆ ಕಂಡಿವೆ. ಅಷ್ಟೇ ಅಲ್ಲದೇ ಹೈನುಗಾರಿಕೆಯೇ ಕುಟುಂಬಗಳ ಆರ್ಥಿಕ ಮೂಲಗಳಲ್ಲಿ ಒಂದಾಗಿದ್ದು, ಮನ್‌ಮುಲ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಸ್.ಮಹೇಶ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಮನ್‌ಮುಲ್ ಚುನಾವಣೆಯ ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಸ್.ಮಹೇಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಳಿಯಪ್ಪ, ತಾಲೂಕು ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಪುರಸಭಾ ಸದಸ್ಯರಾದ ಪ್ರಿಯಾಂಕಾ ಅಪ್ಪುಗೌಡ, ಸುಮಿತ್ರಾ ರಮೇಶ್, ಮುಖಂಡರಾದ ಕೂಳಗೆರೆ ಶೇಖರ್, ಕೆ.ಟಿ.ರಾಜಣ್ಣ, ಅಜ್ಜಹಳ್ಳಿ ರಾಮಣ್ಣ, ಚಾಮನಹಳ್ಳಿ ಸ್ವಾಮಿಗೌಡ, ಸುಧಾಕರ್, ದಯಾನಂದ್, ರವಿ, ದೇವರಾಜು, ಕುಶ, ರವಿ, ಪ್ರವೀಣ್, ಕೋಣಸಾಲೆ ಮಧು, ಇಂದುಕುಮಾರ್ ಇದ್ದರು.