ನ್ಯೂಸ್

ಕಾಂಗ್ರೆಸ್ ರಹಸ್ಯ ಕಾರ್ಯಸೂಚಿ: ಛಲವಾದಿ ಆರೋಪ | Stand clarify urge

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ದುರುಪಯೋಗ ಮಾಡಿದ್ದಾಯಿತು. ಈಗ ಎಸ್‌ಟಿ ಮೀಸಲು ಕಸಿಯಲು ಕಾಂಗ್ರೆಸ್ ಸರ್ಕಾರ ರಹಸ್ಯ ಕಾರ್ಯಸೂಚಿ ಹೆಣೆದಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಪಾದಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಎಸ್‌ಟಿಗೆ ಯಾವುದೇ ಸಮುದಾಯವನ್ನು ಸೇರಿಸಲು ಬಿಜೆಪಿ ವಿರೋಧಿಸುತ್ತಿಲ್ಲ. ಆದರೆ ಆಯಾ ಪ್ರವರ್ಗದಲ್ಲಿ ಪಡೆಯುತ್ತಿರುವ ಮೀಸಲು ಪ್ರಮಾಣ ಸಹಿತ ಸೇರ್ಪಡೆ ಪಕ್ಷದ ಆಗ್ರಹವಾಗಿದೆ ಎಂದರು.

ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಿಸದೆ ಹೊಸದಾಗಿ ಸಮುದಾಯಗಳನ್ನು ಸೇರಿಸಿದರೆ ಪರಿಶಿಷ್ಟ ವರ್ಗಗಳ ಮೀಸಲಿಗೆ ಕೈ ಹಾಕಿದಂತಾಗುತ್ತದೆ. ಮೂಲ ಸಮುದಾಯದ ಹಕ್ಕು ಕಸಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಸುಳ್ಳು ಬಯಲು

ಪರಿಶಿಷ್ಟ ಜಾತಿ, ಪಂಗಡಗಳ ದೀರ್ಘಾವಧಿಯ ಬೇಡಿಕೆಗೆ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸ್ಪಂದಿಸಿ, ಎಸ್‌ಸಿ ಮೀಸಲು ಶೇಕಡ 15 ರಿಂದ 17, ಎಸ್‌ಟಿ ಮೀಸಲು ಪ್ರಮಾಣವನ್ನು ಶೇ.3 ರಿಂದ ಏಳಕ್ಕೆ ಹೆಚ್ಚಿಸುವ ಕ್ರಾಂತಿಕಾರಕ ತೀರ್ಮಾನ ತೆಗೆದುಕೊಂಡಿತು.

ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಅನುಷ್ಠಾನಕ್ಕೆ ತಂದಾಗ ಆಗಿನ ವಿಧಾನಸಭೆ ಪ್ರತಿಪಕ್ಷ ನಾಯಕ, ಹಾಲಿ ಸಿಎಂ ಸಿದ್ದರಾಮಯ್ಯ ಮೀಸಲು ಊರ್ಜಿತವಾಗುವುದಿಲ್ಲ ಎಂದು ಹೇಳಿ ಜನರ ದಿಕ್ಕು ತಪ್ಪಿಸಲು ಹವಣಿಸಿದರು.

ಚುನಾವಣೆಯಲ್ಲಿ ಇದೇ ಸುಳ್ಳು ಅಸ ಮಾಡಿಕೊಂಡು ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ದಾರಿ ತಪ್ಪಿಸಿದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಎಸ್‌ಸಿ ಶೇ.17 ಮತ್ತು ಎಸ್‌ಟಿಗೆ ಶೇ.7ರಷ್ಟು ಮೀಸಲು ಸೌಲಭ್ಯ ಮುಂದುವರಿಸಿದ್ದಾರೆ.

ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣವು ಕೂಡ ಶೇ.17ರ ಆಧಾರದಲ್ಲಿ ಆಗಿದೆ. ಅಂದರೆ ಮೀಸಲು ಹೆಚ್ಚಳ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿರುವುದು ಬಯಲಾಗಿದೆ ಎಂದು ಚಾಟಿ ಬೀಸಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣ ಖಂಡನೀಯ. ಈ ದುಷ್ಕೃತ್ಯ ಎಸಗಿದ ವ್ಯಕ್ತಿಯು ಕ್ಷಮೆಗೆ ಅರ್ಹನಲ್ಲ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.