ಹನೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನೇಮಕಗೊಂಡ ಸುವರ್ಣಾ ಅವರಿಗೆ ಮಾಜಿ ಶಾಸಕ ಆರ್.ನರೇಂದ್ರ ಆದೇಶ ಪ್ರತಿ ವಿತರಿಸಿದರು. ಲತಾ ನಾಗರಾಜು, ರಾಚಯ್ಯ, ಗಿರೀಶ್, ನಾಗೇಂದ್ರ ಇತರರು ಇದ್ದರು. 
ನ್ಯೂಸ್

ಕಾಂಗ್ರೆಸ್ ಮಹಿಳಾ ಘಟಕ ಸಾಮಾಜಿಕ ಸೇವೆ ಒದಗಿಸಲಿ

ಹನೂರು: ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡುವುದರ ಜತೆಗೆ ಕಾಂಗ್ರೆಸ್ ಮಹಿಳಾ ಘಟಕ ಸಾಮಾಜಿಕ ಸೇವೆಯನ್ನು ಒದಗಿಸಬೇಕು ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಹಿಳಾ ಘಟಕದ ಪದಾಧಿಕಾರಿಗಳಿಗೆ ಮಂಜೂರಾತಿ ಆದೇಶ ಪ್ರತಿ ವಿತರಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತವನ್ನು ನೀಡುವುದರ ಜತೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಜನಮನ್ನಣೆ ಗಳಿಸಿದೆ. ಇತ್ತ ಮಹಿಳೆಯರು ಸಬಲರಾಗಬೇಕು ಎನ್ನುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಪ್ರಯೋಜನವನ್ನು ಮಹಿಳೆಯರು ಪಡೆಯುತ್ತಿದ್ದಾರೆ. ಆದ್ದರಿಂದ ಮಹಿಳೆಯರು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇನ್ನು ಮಹಿಳಾ ಘಟಕ ರಾಜಕೀಯಕ್ಕಷ್ಟೇ ಸೀಮಿತವಾಗಬಾರದು. ಮಹಿಳೆಯರ ಮೇಲಿನ ದೌರ್ಜನ್ಯ, ವಂಚನೆ, ಅನ್ಯಾಯದ ವಿರುದ್ಧವೂ ಹೋರಾಡಬೇಕು. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕೊಡಿಸಿ ಅನುಕೂಲ ಕಲ್ಪಿಸುವುದರ ಮೂಲಕ ಸಾಮಾಜಿಕ ಸೇವೆಯನ್ನು ಸಹ ಒದಗಿಸಲು ಸಿದ್ಧರಿರಬೇಕು ಎಂದು ತಿಳಿಸಿದರು.

ಸುವರ್ಣಾ ಮಹಿಳಾ ಅಧ್ಯಕ್ಷೆ: ಇದೇ ವೇಳೆ ಹನೂರು ಬ್ಲಾಕ್ ಕಾಂಗ್ರೆಸ್ ಮಹಿಳೆ ಅಧ್ಯಕ್ಷೆಯಾಗಿ ನೇಮಕಗೊಂಡ ಸುವರ್ಣಾ, ಉಪಾಧ್ಯಕ್ಷೆ ರಾಜಮ್ಮ, ಕಾರ್ಯದರ್ಶಿಗಳಾದ ಸುಂದ್ರಮ್ಮ, ಜ್ಯೋತಿ ಹಾಗೂ ಸುಧಾ ಅವರಿಗೆ ಆದೇಶ ಪ್ರತಿ ನೀಡಲಾಯಿತು. ುಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲತಾ ನಾಗರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ರಾಚಯ್ಯ, ಪಪಂ ಸದಸ್ಯ ಗಿರೀಶ್, ಮುಖಂಡ ನಾಂಗೇಂದ್ರ ಹಾಗೂ ಇನ್ನಿತರರು ಇದ್ದರು.