ನ್ಯೂಸ್

ಶಾಸಕರುಗಳ ವೈಫಲ್ಯದಿಂದ ಕಾಂಗ್ರೆಸ್‌ಗೆ ಗೆಲುವು : ಪ್ರಮುಖರ ಅಭಿಮತ

ಮಡಿಕೇರಿ: ಅಭಿವೃದ್ಧಿ ವಿಚಾರದಲ್ಲಿ ಶಾಸಕರುಗಳ ವೈಫಲ್ಯ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ವರದಾನವಾಗಲಿದೆ ಎಂದು ಪಕ್ಷದ ಮುಖಂಡರು ಅಭಿಪ್ರಾಯಪಟ್ಟರು.


ಮಡಿಕೇರಿ ವಿಧಾನಸಭಾ ಕ್ಷೇತ್ರದ ಮೂರ್ನಾಡು ವಲಯ ಕಾಂಗ್ರೆಸ್ ಕಛೇರಿ ಉದ್ಘಾಟನೆ ಮತ್ತು ವಲಯ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಹಿರಿಯ ಮುಖಂಡರು, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಎರೆಡು ಕ್ಷೇತ್ರದ ಶಾಸಕರು ವೈಫಲ್ಯ ಕಂಡಿದ್ದಾರೆ. ಇದು ನಮ್ಮ ಪಕ್ಷಕ್ಕೆ ವರದನವಾಗಲಿದ್ದು, ೨೦೨೩ ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದರು.


ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ನೆರವಿನ ಹಸ್ತ ಚಾಚುತ್ತಿರುವ ಡಾ.ಮಂಥರ್ ಗೌಡ ಅವರನ್ನು ಮಡಿಕೇರಿ ಬ್ಲಾಕ್ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಹಾಗೂ ವಲಯಾಧ್ಯಕ್ಷ ಕೇಶವ ಅವರ ನೇತೃತ್ವದಲ್ಲಿ ಇತರ ಪಕ್ಷಗಳ ಕಾರ್ಯಕರ್ತರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಜನ ಇದೇ ಸಂದರ್ಭ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.


ಸಭೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಚಂದ್ರಮೌಳಿ, ಯುವ ಮುಖಂಡ ಡಾ.ಮಂಥರ್ ಗೌಡ, ಕೆಪಿಸಿಸಿ ವಕ್ತಾರ ಟಿ.ಪಿ.ರಮೇಶ್, ಜಿ.ಪಂ ಮಾಜಿ ಅಧ್ಯಕ್ಷರುಗಳಾದ ದೀರ್ಘಕೇಶಿ ಶಿವಣ್ಣ, ಪಾಪು ಸಣ್ಣಯ್ಯ ಇತರರು ಉಪಸ್ಥಿತರಿದ್ದರು.