ನ್ಯೂಸ್

ಮುಂಬೈನಲ್ಲಿ ಶಿವಸೇನೆಗೆ ಉಲ್ಟಾ ಹೊಡೆದ ಕಾಂಗ್ರೆಸ್​; ಸ್ವತಂತ್ರವಾಗಿ ಸ್ಪರ್ಧಿಸೋಕೆ ಕಾಂಗ್ರೆಸ್​ ರೆಡಿ

Mandara

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್​ಸಿಪಿಯೊಂದಿಗೆ ಮಹಾವಿಕಾಸ ಅಘಡಿ ಮಾಡಿಕೊಂಡು ಆಡಳಿತ ಪಕ್ಷವಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್​ ಇದೀಗ ಶಿವಸೇನೆಗೆ ಟಕ್ಕರ್​ ನೀಡಲು ಸಿದ್ಧವಾಗಿದೆ. ಇದರಿಂದಾಗಿ 30 ವರ್ಷಗಳ ಕಾಲ ಶಿವಸೇನೆಯ ಕೈಲಿದ್ದ ಬೃಹನ್ಮುಂಬೈ ಪಾಲಿಕೆ ಮುಂದಿನ ಆಡಳಿತಾವಧಿಗೆ ಪಕ್ಷದ ಕೈ ಬಿಟ್ಟು ಹೋಗಲಿದೆಯೇ ಎನ್ನುವ ಅನುಮಾನಗಳು ಆರಂಭವಾಗಿವೆ.

2022ಕ್ಕೆ ಬೃಹನ್ಮುಂಬೈ ನಗರ ಪಾಲಿಕೆಗೆ (ಬಿಎಂಸಿ) ಚುನಾವಣೆ ನಡೆಯಲಿದೆ. ಕಳೆದ 30 ವರ್ಷಗಳಿಂದ ಬಿಎಂಸಿ ಆಡಳಿತವನ್ನು ಎನ್​ಡಿಎ ಸರ್ಕಾರದೊಂದಿಗಿನ ಮೈತ್ರಿಯಿಂದಾಗಿ ಶಿವಸೇನೆ ತನ್ನದಾಗಿಸಿಕೊಂಡಿದೆ. ಆದರೆ ಈ ವರ್ಷ ಎನ್​ಡಿಎಗೆ ಕೈ ಕೊಟ್ಟಿರುವ ಶಿವಸೇನೆ ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಇದೀಗ ಬಿಎಂಸಿ ವಿಚಾರದಲ್ಲಿ ಕಾಂಗ್ರೆಸ್​ ಶಿವಸೇನೆಗೆ ಕೈ ಕೊಡಲು ಸಿದ್ಧವಾಗಿದೆ.

2022ರ ಬಿಎಂಸಿ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ, ಒಬ್ಬಂಟಿಯಾಗಿ ಸ್ಪರ್ಧಿಸುವುದಾಗಿ ಕಾಂಗ್ರೆಸ್​ನ ನಾಯಕ ರವಿ ರಾಜಾ ಹೇಳಿದ್ದಾರೆ. ಅತ್ತ ಬಿಜೆಪಿ ಕೂಡ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದೆ. ಇದರಿಂದಾಗಿ ಶಿವಸೇನೆಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

2017ರಲ್ಲಿ ನಡೆದ ಬಿಎಂಸಿ ಚುನಾವಣೆಯಲ್ಲಿ 227 ಸ್ಥಾನಗಳ ಪೈಕಿ ಬಿಜೆಪಿ 82 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಶಿವಸೇನೆ 86 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ರಾಜ್​ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್​ಸಿ) ಆರು ಸ್ಥಾನಗಳಲ್ಲಿ ಜಯ ಕಂಡಿತ್ತು. ನಂತರ ಎಂಎನ್​ಸಿ ಕೂಡ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿತು. ಉಳಿದಂತೆ ಕಾಂಗ್ರೆಸ್​ 30 ಮತ್ತು ಎನ್​ಸಿಪಿ 9 ಸ್ಥಾನಗಳಲ್ಲಿ ಜಯ ಸಾಧಿಸಿದ್ದವು. (ಏಜೆನ್ಸೀಸ್​)