ನ್ಯೂಸ್

ಗೋವಾದಲ್ಲಿ ರಾಜ್ಯ ಕೈ ನಾಯಕರ ಕಾರ್ಯಾಚರಣೆ; ಅಧಿಕಾರ ಹಿಡಿಯಲೇಬೇಕೆಂಬ ಹಠ..

Webdesk - Ravikanth

ಬೆಂಗಳೂರು: ಪುಟ್ಟ ಗೋವಾವನ್ನು ವಶ ಮಾಡಿಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಸಾಹಸಪಡುತ್ತದೆ. ಮುಂಬರುವ ಚುನಾವಣೆಯಲ್ಲಿ ಹೇಗಾದರೂ ಅಧಿಕಾರ ಹಿಡಿಯಲೇಬೇಕೆಂಬ ಹಠತೊಟ್ಟಿರುವ ದೆಹಲಿ ಕೈ ನಾಯಕರು ಪಕ್ಷದ ರಾಜ್ಯ ಘಟಕದ ನೆರವು ಪಡೆದುಕೊಂಡಿದ್ದಾರೆ.

ಈ ಹಿಂದೆ ಕೆಪಿಸಿಸಿ ಮಾಜಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಅವರು ಪ್ರಸ್ತುತ ಗೋವಾದ ಉಸ್ತುವಾರಿಯಾಗಿದ್ದಾರೆ. ಅವರೊಟ್ಟಿಗೆ ರಾಜ್ಯ ಘಟಕದ 15 ಪಕ್ಷ ನಿಷ್ಠರು ಕಳೆದ 10 ದಿನಗಳಿಂದ ಬೇರು ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ತಂಡ, ಮೈಕ್ರೋಮ್ಯಾನೇಜ್‌ಮೆಂಟ್ ತಂಡ, ತರಬೇತಿ ಆಯೋಜನೆ ಸೇರಿ ವಿವಿಧ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

ಇನ್ನೊಂದು ಮುಖವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಫೆಬ್ರವರಿ 8 ಮತ್ತು 9ರಂದು ಗೋವಾದಲ್ಲಿ ಪ್ರಚಾರ ಸಭೆ ಮುನ್ನೆಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಾಗಲೇ ಒಂದು ಸುತ್ತಿನ ಪ್ರಚಾರ ಸಭೆ ನಡೆಸಿ ಬಂದಿದ್ದು, ಮತ್ತೊಂದು ಸುತ್ತು ಅಲ್ಲಿಗೆ ತೆರಳವರು. ಫೆ.6, 7ರಂದು ಎಚ್.ಕೆ.ಪಾಟೀಲ್ ಪ್ರಚಾರಕ್ಕೆ ತೆರಳವರು. ಇವರಲ್ಲದೇ 15 ಮಂದಿ ಶಾಸಕರಿಗೆ ವಿವಿಧ ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ನೀಡಿದ್ದು, ಅವರೆಲ್ಲೂ ಪ್ರಚಾರದಲ್ಲಿ ತೊಡಗಿದ್ದಾರೆ.

ಗೋವಾದ ಸುಮಾರು 20 ಕ್ಷೇತ್ರಗಳಲ್ಲಿ ಕನ್ನಡಿಗ ಮತದಾರರಿದ್ದು, ಅವರನ್ನು ಗುರಿಯಾಗಿಸಿಯೂ ಪ್ರಚಾರ ನಡೆಸುವ ಜತೆಗೆ ಒಟ್ಟಾರೆ ಚುನಾವಣೆ ತಂತ್ರದ ಭಾಗವಾಗಿ ರಾಜ್ಯ ಕೈ ನಾಯಕರು ಪಾಲ್ಗೊಂಡು ಬೆವರು ಹರಿಸುತ್ತಿದ್ದಾರೆ.

ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ, ಗೋವಾದಲ್ಲಿ ಪಕ್ಷದ ಚುನಾವಣಾ ನಿರ್ವಹಣೆ ಜವಾಬ್ದಾರಿ ತೆಗೆದುಕೊಂಡಿರುವ ನಟರಾಜ ಗೌಡ, ಈ ಬಾರಿ ಪಕ್ಷದ ಪರವಾದ ವಾತಾವರಣ ಕಾಣಿಸಿದೆ. ಬೇರೆ ಬೇರೆ ಪಕ್ಷದಿಂದ ನಮ್ಮ ಕಡೆ ಬರುತ್ತಿದ್ದಾರೆ. ಬಿಜೆಪಿಯ ಅಪಪ್ರಚಾರ ತಡೆಯಲು ನಾವು ಪ್ರಯತ್ನ ಮಾಡುತ್ತಿದ್ದರು, ಬೇರು ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.

ಕಳೆದ 10 ದಿನಗಳಿಂದಲೂ ಕರ್ನಾಟದಿಂದ ಬಂದಂತಹ 15 ಮಂದಿ ಸಂಯೋಜಕರು ಕೆಲಸ ಮಾಡುತ್ತಿದ್ದು, ರಾಜ್ಯದ ಶಾಸಕರು, ಪ್ರಮುಖ ನಾಯಕರು ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.| ನಟರಾಜ ಗೌಡ ಕೆಪಿಸಿಸಿ ವಕ್ತಾರ