ಬೆಂಗಳೂರು: ಲಾಕ್ಡೌನ್ನಿಂದಾಗಿ ರಾಜಕೀಯವೇ ಚದುರಿದಂತಾಗಿದೆ. ಆಡಳಿತ ಪಕ್ಷ ಬಿಜೆಪಿ ಕರೊನಾ ಪರಿಹಾರ ಕಾರ್ಯದಲ್ಲಿ ಪಕ್ಷವನ್ನು ತೊಡಗಿಸಿಕೊಳ್ಳುವಲ್ಲಿ ಯತ್ನಿಸಿದರೆ, ಕಾಂಗ್ರೆಸ್ ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಸಾಹಸ ನಡೆಸಿತು. ಇದೀಗ ಕಾಂಗ್ರೆಸ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪಕ್ಷದ ಸಂಘಟನೆ ಬಲಗೊಳಿಸಲು ಸರಣಿ ಸಭೆ ನಡೆಸಲು ನಿರ್ಧರಿಸಿದೆ.
2018ರ ವಿಧಾನಸಭೆ ಚುನಾವಣೆ ಸೋಲು, ಮೈತ್ರಿ ಸರ್ಕಾರದ ಪ್ರಹಸನ ಮತ್ತು ಪತನ, ಅಧ್ಯಕ್ಷರ ಬದಲು ಹೀಗೆ ವಿವಿಧ ಕಾರಣದಿಂದ ಪಕ್ಷ ಒಂದಷ್ಟು ಜಝುರಿತವಾಗಿತ್ತು. ಇಷ್ಟರ ನಡುವೆಯೂ ಗುಂಪುಗಾರಿಕೆ ಕೂಡ ನಡೆದಿತ್ತು. ಇದೀಗ ಕೆಪಿಸಿಸಿ ಹೊಸ ಅಧ್ಯಕ್ಷರು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ವಿಧಾನಸಭಾ ಕ್ಷೇತ್ರಗಳ ವೀಕ್ಷಕರು, ಮಾಜಿ ಉಸ್ತುವಾರಿ ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರವಾರು ನೇಮಕಗೊಂಡ ಸಂಯೋಜಕರು, ಎಲ್ಲ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಮಾಜಿ ಸಂಸದರು ಮತ್ತು 2019ರ ಚುನಾವಣೆಯಲ್ಲಿ ಸ್ಪರ್ಧಿಸಿದವರು, ಎನ್ಎಸ್ಯುುಐ, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, 2018ಕ್ಕಿಂತ ಹಿಂದಿನ ಮಾಜಿ ಶಾಸಕರು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳು, ವಿವಿಧ ನಿಗಮ, ಮಂಡಳಿಗಳ ಮಾಜಿ ಅಧ್ಯಕ್ಷ- ಉಪಾಧ್ಯಕ್ಷರು, ಎಲ್ಲ ಘಟಕ-ಕೋಶಗಳ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರನ್ನು ಪ್ರತ್ಯೇಕವಾಗಿ ಆಹ್ವಾನಿಸಿ ಸಭೆ ನಡೆಸಲಾಗುತ್ತಿದೆ. ಮೇ 19ರಿಂದ 23ರವರೆಗೂ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ನಡೆಯುವುದು. ಕೊನೆಯ ದಿನ ಕೆಪಿಸಿಸಿ ಸರ್ವ ಸದಸ್ಯರ ಸಭೆಯನ್ನೂ ಕರೆಯಲಾಗುತ್ತಿದೆ. ಈ ಮೂಲಕ ಎಲ್ಲರನ್ನೂ ಒಟ್ಟಾಗಿ ಒಂದೇ ವೇದಿಕೆಯಡಿ ಕರೆತರುವುದು, ಅವರಿಗೆ ಮುಂದಿನ ರೂಪುರೇಷೆಗಳ ಬಗ್ಗೆ ತಿಳುವಳಿಕೆ ಮೂಡಿಸುವುದು ಇಡೀ ಸರಣಿ ಸಭೆಯ ಉದ್ದೇಶವಾಗಿದೆ.
ಇದನ್ನೂ ಓದಿ: ಲಾಕ್ಡೌನ್ನಿಂದಾಗಿ ಸಾನಿಯಾ-ಮಲಿಕ್ ದೂರ!
ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆ ಸೋಲು ಹಾಗೂ ಸರ್ಕಾರ ಇಲ್ಲದೇ ಇರುವುದರಿಂದ ಪಕ್ಷದ ಜಿಲ್ಲಾಮಟ್ಟದ ಪ್ರಮುಖರು, ಮುಖಂಡರು ಕ್ರಿಯಾಶೀಲರಾಗಿಲ್ಲ. ಅವರೆಲ್ಲರನ್ನು ಪುನಃ ಪಕ್ಷದ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರೊನಾ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಂಗಳವಾರ ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಘೊಷಣೆ ಮಾಡಿರುವ ಪ್ಯಾಕೇಜ್ಗಳು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಗ್ರಾಮ ಪಂಚಾಯಿತಿ ಚುನಾವಣೆ, ವಿವಿಧ ಯೋಜನೆಗಳ ರದ್ದು ಹಾಗೂ ನಾನಾ ವಿಷಯಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ. ಸರ್ಕಾರ ಕೈಗೊಂಡಿರುವ ಕ್ರಮಗಳು, ಮುಂದೆ ಕೈಗೆತ್ತಿಕೊಳ್ಳಬೇಕಾದ ಹೋರಾಟದ ಬಗ್ಗೆಯೂ ಸಭೆ ಚರ್ಚಿಸಲಿದೆ.
ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೇ 19ರಿಂದ 23ರವರೆಗೆ ಸಭೆ ಕರೆದಿದ್ದಾರೆ. ಸಂಘಟನೆ ಕ್ರಿಯಾಶೀಲವಾಗಿಡಲು ಚಟುವಟಿಕೆ ನಡೆಯಲಿದೆ. | ಸಲೀಂ ಅಹ್ಮದ್ ಕೆಪಿಸಿಸಿ ಕಾರ್ಯಾಧ್ಯಕ್ಷ